ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಡಿಸೆಂಬರ್ 9, 10 : ಪಡುಬಿದ್ರಿಯಲ್ಲಿ ಕೃಷಿ ಮೇಳ

Posted On: 07-12-2023 11:42AM

ಪಡುಬಿದ್ರಿ : ಇಲ್ಲಿನ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಹಯೋಗದೊಂದಿಗೆ ಪಡುಬಿದ್ರಿಯ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಪ್ರಥಮ ಬಾರಿಗೆ ಡಿಸೆಂಬರ್ 9 ಮತ್ತು 10 ರಂದು ಬೆಳಿಗ್ಗೆ 8ರಿಂದ ರಾತ್ರಿ 8 ರವರೆಗೆ ವಿಶೇಷ ಆಕರ್ಷಣೆಗಳೊಂದಿಗೆ ಕೃಷಿ ಮೇಳ ಜರಗಲಿದೆ ಎಂದು ಕೃಷಿ ಮೇಳದ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಹೇಳಿದರು. ಅವರು ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಗುರುವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೃಷಿ ಮೇಳದ ಉದ್ಘಾಟನೆಯನ್ನು ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ನೆರವೇರಿಸಲಿದ್ದು, ಜೈನ ಮಠ ಮೂಡಬಿದಿರೆಯ ಭಾರತ ಭೂಷಣ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಎರಡು ದಿನಗಳ ಕಾಲ ಕೃಷಿ ಸಂಬಂಧಿ ಗೋಷ್ಠಿಗಳ ಜೊತೆಗೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಜೊತೆಗೆ ಪಡುಬಿದ್ರಿ ಆಸುಪಾಸಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರಮಗಳ ಜೊತೆಗೆ ವಿಶೇಷ ಆಕರ್ಷಣೆಯಾಗಿ ಯಕ್ಷಗಾನ, ನಾಟ್ಯ ವೈಭವ, ವಿಟ್ಲ ಶ್ರೀ ವಿಠಲ ನಾಯ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ, ಜನಪದ ನೃತ್ಯ ವೈಭವ, ಭರತನಾಟ್ಯ ವೈವಿಧ್ಯ ಮೊದಲಾದ ಕಾರ್ಯಕ್ರಮಗಳು ಕೃಷಿ ಮೇಳಕ್ಕೆ ಮೆರುಗು ನೀಡಲಿದೆ.

ಆದಿತ್ಯವಾರ ಸಂಜೆ ಸಮಾರೋಪ ಸಮಾರಂಭದೊಂದಿಗೆ ಕೃಷಿ ಮೇಳ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸುಮಾರು 10,000ಕ್ಕೂ ಮಿಕ್ಕಿ ಜನರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸುಮಾರು 80ಕ್ಕೂ ಮಿಕ್ಕಿ ಕೃಷಿ ಸಂಬಂಧಿ ಮಳಿಗೆಗಳು ವಿಶೇಷ ಉತ್ಸಾಹದಿಂದ ಬಂದು ಭಾಗವಹಿಸಲು ನೋಂದಣಿ ಮಾಡಿಕೊಂಡಿರುತ್ತಾರೆ. ಈ ಸಮಾರಂಭದಲ್ಲಿ ಅನೇಕ ಕೃಷಿ ಸಾಧಕರನ್ನು ಕೃಷಿ ಋಷಿ ಸಂಮ್ಮಾನ್ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಕೃಷಿ ಮೇಳದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಪ್ರಸಾದ್ ಎಲ್ಲದಡಿ, ಜಗದಭಿರಾಮ, ನವೀನ್ ಚಂದ್ರ ಶೆಟ್ಟಿ, ಶರಾವತಿ, ನೀತಾ ಗುರುರಾಜ್, ನಯನಭಿರಾಮ, ದಿನಕರ ರಾವ್, ಶೇಖರ ರಾವ್, ಜನಾರ್ಧನ ರಾವ್, ಅಶೋಕ್ ಪೂಜಾರಿ, ರವಿ ಶೆಟ್ಟಿ, ಸತೀಶ್ ರಾವ್, ಅಮರಭಿರಾಮ ಮತ್ತಿತರರು ಉಪಸ್ಥಿತರಿದ್ದರು.