ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಕೃಷಿ ಮೇಳ ಸಮಾರೋಪ

Posted On: 10-12-2023 08:51PM

ಪಡುಬಿದ್ರಿ : ಅಂದಿನ ಕಾಲದಲ್ಲಿ ಯಾವುದೇ ಯಂತ್ರದ ಸಹಾಯವಿಲ್ಲದೆ ಬಹಳ ಕಷ್ಟದಿಂದ ನಮ್ಮ ಹಿರಿಯರು ಕೃಷಿಯನ್ನು ನಿರ್ವಹಿಸುತ್ತಿದ್ದರು. ಕೃಷಿ ತೋ ನಾಸ್ತಿ ದುರ್ಭೀಕ್ಷಮ್ ಎಂಬ ಮಾತಿನಂತೆ ಕೃಷಿಯು ಇಂದು ಕಷ್ಟಕರವಾದರೂ ಇಷ್ಟಪಟ್ಟು ನಿರ್ವಹಿಸಿದ್ದಲ್ಲಿ ಲಾಭದಾಯಕವಾಗಿದೆ. ಅಂದು ನಮ್ಮ ಮನೆಯ ಹಿರಿಯರೇ ಕೃಷಿ ತಜ್ಞರಾಗಿರುತ್ತಿದ್ದರು. ಈಗ ಹಿರಿಯರ ಅನುಭವದ ಮಾತು ಕೃಷಿಗೆ ಅನಿವಾರ್ಯವಾಗಿದೆ. ಹಿರಿದಾಗಿ ಎಕರೆಗಟ್ಟಲೆಯಲ್ಲಿದ್ದ ಕೃಷಿ ಭೂಮಿಗಳು ಕೈಗಾರಿಕೆ, ವಸತಿ ಸಮುಚ್ಚಯಗಳಾಗಿ ಕಿರಿದಾದ ಪ್ರದೇಶಗಳಾಗಿ ಮಾರ್ಪಾಡುಗೊಂಡಿದೆ. ಕೃಷಿಯ ಬಗೆಗಿನ ಜಾಗೃತಿಗೆ ಕೃಷಿ ಮೇಳಗಳು ಸಹಾಯಕವಾಗಿದೆ ಎಂದು ಕಟೀಲು ಕ್ಷೇತ್ರದ ಅರ್ಚಕರಾದ ವೇ.ಮೂ. ಶ್ರೀ ಹರಿನಾರಾಯಣದಾಸ ಅಸ್ರಣ್ಣ ಹೇಳಿದರು. ಅವರು ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಹಯೋಗದೊಂದಿಗೆ ಆದಿತ್ಯವಾರ ಪಡುಬಿದ್ರಿಯ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಪ್ರಥಮ ಬಾರಿಗೆ ಜರಗಿದ ಕೃಷಿ ಮೇಳದ ಸಮಾರೋಪದಲ್ಲಿ ಮಂಗಳ ಮಂತ್ರಕ್ಷತೆಯ ನುಡಿಗಳನ್ನಿತ್ತರು.

ಎಸ್ ಇ ಝಡ್ ಮುಖ್ಯಸ್ಥ ಅಶೋಕ್ ಶೆಟ್ಟಿ ಮಾತನಾಡಿ ಕೃಷಿ ಮೇಳದ ಮೂಲಕ ರೈತರ ಸಬಲೀಕರಣ ಆಗಬೇಕಾಗಿದೆ. ಇದರ ಮೂಲಕ ನಮ್ಮ ಪ್ರದೇಶ, ರಾಜ್ಯ, ದೇಶದ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ರೈತರಿಗೆ ಬೇಕಾದ ಮಾಹಿತಿ ಮುಖ್ಯ. ಆಧುನೀಕರಣಕ್ಕೆ ಒತ್ತು ನೀಡಿ ಲಾಭದಾಯಕದತ್ತ ಕೃಷಿ ಸಾಗುವಲ್ಲಿ ಶ್ರಮಿಸಬೇಕಾಗಿದೆ ಎಂದರು. ಸನ್ಮಾನ : ಕೃಷಿಯಲ್ಲಿ ಸಾಧನೆಗೈದ ಪಿ ಕೆ ಸದಾನಂದ, ಅಪ್ಪು ಪೂಜಾರಿ, ಪೂವಪ್ಪ ಪೂಜಾರಿ, ಪ್ರಭಾಕರ ಎನ್ ಶೆಟ್ಟಿ, ಬಿ ಕೆ ದೇವರಾವ್, ಕೊಳಚೂರು ಜಗನ್ನಾಥ ಮೂಲ್ಯರನ್ನು ಸನ್ಮಾನಿಸಲಾಯಿತು.

ಕೃಷಿ ಮೇಳದ ಅಧ್ಯಕ್ಷರಾದ ಶಶಿಕಾಂತ್ ಪಡುಬಿದ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆಪಿಸಿಸಿ ಸಂಯೋಜಕರಾದ ನವೀನ್ ಚಂದ್ರ ಜೆ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವಿ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಎನ್ ಶೆಟ್ಟಿ, ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಎರ್ಮಾಳು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವಿರಾಜ್, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಧಾನ ಅರ್ಚಕ ಜಗದಾಭಿರಾಮ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಎರ್ಮಾಳು, ಕಾರ್ಯಕ್ರಮ ಸಂಚಾಲಕ ದೇವಾನಂದ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಕುಮಾರಿ ಶರಣ್ಯ ಪ್ರಾರ್ಥಿಸಿದರು. ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಎರ್ಮಾಳು ಸ್ವಾಗತಿಸಿದರು. ರವಿರಾಜ್ ಎನ್ ಕೋಟ್ಯಾನ್ ಮತ್ತು ಯಶೋಧ ಕಾರ್ಯಕ್ರಮ ನಿರೂಪಿಸಿದರು. ದೇವಾನಂದ್ ಭಟ್ ವಂದಿಸಿದರು. ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.