ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ಲೀಗಲ್ ಚೇಂಬರ್ಸ್ ಉದ್ಘಾಟನೆ, ಕೋಟಿ ಗೀತಾ ಲೇಖನ ಯಜ್ಞ ಮಹಾಅಭಿಯಾನಕ್ಕೆ ಚಾಲನೆ

Posted On: 14-12-2023 07:44PM

ಕಾಪು : ಶ್ರೀ ಕೃಷ್ಣನಿಗೆ ಅತಿಪ್ರಿಯವಾದ ಭಗವದ್ಗೀತೆಯು ಜಾಗತಿಕ ಶಾಂತಿಗೆ ಪೂರಕವಾಗಿದೆ. ಭಗವದ್ಗೀತೆ ಪ್ರತೀಯೊಬ್ಬರಿಗೂ ಮಾರ್ಗದರ್ಶನ ನೀಡುವ ಮಹಾನ್ ಗ್ರಂಥವಾಗಿದ್ದು ಅದರ ಉಪಯುಕ್ತತೆಯನ್ನು ಅರಿತುಕೊಂಡು ತಮ್ಮ ಮುಂದಿನ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯವೆಂದು ಆಚರಿಸಲಾಗುತ್ತದೆ ಎಂದು ಭಾವೀ ಪರ್ಯಾಯ ಪೀಠಾಧಿಪತಿ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಸೋಮವಾರ ಕಾಪು ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿಯ ಜನಾರ್ದನ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಗೊಂಡ ಲೀಗಲ್ ಚೇಂಬರ್ಸ್ ಕಾಪು ಸಂಸ್ಥೆಯನ್ನು ಉದ್ಘಾಟಿಸಿ, ಕಾಪು ತಾಲೂಕಿನಲ್ಲಿ ಕೋಟಿ ಗೀತಾ ಲೇಖನ ಯಜ್ಞ ಮಹಾಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಪು ತಾಲೂಕು ಬೆಳೆಯುತ್ತಿದೆ. ಬೆಳೆಯುತ್ತಿರುವ ಪಟ್ಟಣಕ್ಕೆ ನ್ಯಾಯಾಲಯ ಬರಬೇಕಿದೆ. ಕಾಪು ತಾಲೂಕಿನ ಜನತೆ ತಾಲೂಕು ನ್ಯಾಯಾಲಯ ಬರುವ ನಿರೀಕ್ಷೆಯಲ್ಲಿರುವಾಗಲೇ ಲೀಗಲ್ ಚೇಂಬರ್ಸ್ ಸಂಸ್ಥೆ ಉದ್ಘಾಟನೆಗೊಂಡಿರುವುದು ಸ್ವಾಗತಾರ್ಹವಾಗಿದೆ. ಇವರಿಂದ ಜನತೆಗೆ ನ್ಯಾಯ - ಸಹಕಾರ ಎರಡೂ ದೊರಕುವಂತಾಗಲಿ ಎಂದು ಶುಭ ಹಾರೈಸಿದರು. ಕೋಟಿ ಗೀತಾ ಯಜ್ಞ ಲೇಖನದ ದೀಕ್ಷೆ ಸ್ವೀಕರಿಸಿದ ಕಾಪು ತಾಲೂಕು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಮಾತನಾಡಿ, ಪುತ್ತಿಗೆ ಶ್ರೀಗಳ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸಲು ಜನತೆ ಕಾತರದಿಂದ ಕಾಯುತ್ತಿದ್ದಾರೆ. ಶ್ರೀಗಳ ಪರ್ಯಾಯ ಯೋಜನೆಗಳಿಗೆ ತಾಲೂಕು ಆಡಳಿತ ವತಿಯಿಂದಲೂ ಅವಶ್ಯಕ ಸಹಕಾರ ನೀಡಲಾಗುವುದು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ ಶುಭಾಶಂಸನೆಗೈದರು. ಉಡುಪಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ರೆನಾಲ್ಡ್ ಪ್ರವೀಣ್ ಕುಮಾರ್, ಉದ್ಯಮಿ ಹರೀಶ್ ಶೆಟ್ಟಿ ಗುರ್ಮೆ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರುಣ್ ಕುಮಾರ್ ಬಿ.ಕೆ., ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಮರ ಶೆಟ್ಟಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಬಿಲ್ಲವರ ಸಂಘದ ಅಧ್ಯಕ್ಷ ವಿಕ್ರಂ ಕಾಪು, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು, ಕಟ್ಟಡದ ಮಾಲಕ ವಿಶ್ವನಾಥ್ ಶೆಟ್ಟಿ, ಕರ್ನಾಟಕ ಹಾಲು ಮಹಾಮಂಡಲದ ನಿರ್ದೇಶ ಕಾಪು ದಿವಾಕರ ಶೆಟ್ಟಿ, ಕಳತ್ತೂರು ಗರಡಿ ಅರ್ಚಕ ವಿಶ್ವನಾಥ ಅಮೀನ್ ಕಳತ್ತೂರು, ಸಮಾಜ ಸೇವಕಿ ಗೀತಾಂಜಲಿ ಎಂ. ಸುವರ್ಣ, ಮೋಹನ್ ಬಂಗೇರ ಕಾಪು ಅತಿಥಿಗಳಾಗಿ ಭಾಗವಹಿಸಿದ್ದರು.

ಕಾಪು ಲೀಗಲ್ ಚೇಂಬರ್‍ಸ್ ನ ಪ್ರವರ್ತಕರಾದ ಗಿರೀಶ್ ಎಸ್.ಪಿ. ಸ್ವಾಗತಿಸಿದರು. ಜೇಸಿಐ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಪ್ರಸ್ತಾವನೆಗೈದರು. ದಂಡತೀರ್ಥ ಪ. ಪೂ. ಕಾಲೇಜಿನ ಉಪನ್ಯಾಸಕ ಶಿವಣ್ಣ ಬಾಯಾರ್ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ರಾಕೇಶ್ ವಂದಿಸಿದರು‌.