ಡಿಸೆಂಬರ್ 17 : ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ 80 ; ಅಭಿನಂದನೆ ಕಾರ್ಯಕ್ರಮ - 'ಸಿರಿ ತುಪ್ಪೆ'
Posted On:
16-12-2023 06:28PM
ಉಡುಪಿ : ಖ್ಯಾತ ಜಾನಪದ ವಿದ್ವಾಂಸ, ಸಾಹಿತಿ ಬನ್ನಂಜೆ ಬಾಬು ಅಮೀನ್ ಅವರಿಗೆ 80 ತುಂಬುತ್ತಿರುವ ಸಂದರ್ಭದಲ್ಲಿ ಅವರ ಅಭಿಮಾನಿ ಬಳಗ ವತಿಯಿಂದ ಅಭಿನಂದನೆ ಕಾರ್ಯಕ್ರಮ 'ಸಿರಿ ತುಪ್ಪೆ' ಡಿಸೆಂಬರ್ 17 ರಂದು ಬನ್ನಂಜೆಯ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಲಿದೆ.
ಬೆಳಗ್ಗೆ 8.45ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಹಿದಾಯತುಲ್ಲ ಸಾಹೇಬ್ ಎರ್ಮಾಳು ಅವರಿಂದ ನಾಗಸ್ವರ ವಾದನ, ರವಿಕುಮಾರ್ ಕಪ್ಪೆಟ್ಟು ಅವರ ಡೋಲು ವಾದನ, ಎಡ್ಮೇರಿನ ಬೊಗ್ಗು ಪರವ ಅವರಿಂದ ತುಳು ಪಾಡ್ಡನ ನಡೆಯಲಿದೆ. ಬೆಳಗ್ಗೆ 11.45 ಕ್ಕೆ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಪ್ರಬುದ್ಧ ಕಲಾವಿದರಿಂದ 'ಸುದರ್ಶನ ವಿಜಯ' ಯಕ್ಷಗಾನ ಪ್ರದರ್ಶನ ನಡೆಯಲಿದೆ. ಬನ್ನಂಜೆಯವರ ಜೀವನಗಾಥೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರ ಮದ್ಯಾಹ್ನ 2.45 ಕ್ಕೆ ಪ್ರದರ್ಶನಗೊಳ್ಳಲಿದೆ. ಈ ಸಂದರ್ಭ ಅಳಿವಿನಂಚಿನಲ್ಲಿರುವ ತುಳುನಾಡಿನ ಪರಿಕರಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಜನಪದದ ಇತರ ಪ್ರಕಾರಗಳ ಪ್ರಾತಕ್ಷಿತೆಯೂ ನಡೆಯಲಿದ್ದು, ಜನಪದ ನೃತ್ಯ ಆಯೋಜಿಸಲಾಗಿದೆ.
ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ. ಶಂಕರ್ ಉದ್ಘಾಟಿಸಲಿದ್ದು, ಬನ್ನಂಜೆಯವರ 'ತುಳುನಾಡ ಸುತ್ತಮುತ್ತ' ಹಾಗೂ 'ಗರೋಡಿ ಒಂದು ಚಿಂತನೆ' ಎಂಬ ಎರಡು ಪುಸ್ತಕಗಳ ಅನಾವರಣವನ್ನು ಹಿರಿಯ ಸಾಹಿತಿ ರೋಹಿಣಿ ಬಿ.ಎಂ. ಮಾಡಲಿದ್ದಾರೆ. ಅಕ್ಷಯ ಪತ್ರಿಕೆ ಸಂಪಾದಕ ಹರೀಶ್ ಹೆಜ್ಮಾಡಿ ಉಪಸ್ಥಿತರಿರುವರು.
ಬೆಳಗ್ಗೆ 10.30ಕ್ಕೆ ನಡೆಯುವ ವಿಚಾರಗೋಷ್ಠಿಯಲ್ಲಿ ಬನ್ನಂಜೆವರ ಸಮಗ್ರ ಸಾಹಿತ್ಯ ಹಾಗೂ ಜನಪದ ಆಚರಣೆ ಸಂಕಥನಗಳ ಬಗ್ಗೆ ವಿದ್ವಾಂಸರಾದ ಡಾ.ದುಗ್ಗಪ್ಪ ಕಜೆಕಾರ್, ಡಾ.ಯೋಗಿಶ್ ಕೈರೋಡಿ, ಡಾ.ಭರತ್ ಕುಮಾರ್ ಪೊಲಿಪು ವಿಚಾರ ಮಂಡನೆ ಮಾಡಲಿದ್ದಾರೆ. ಡಾ. ಮಹಾಲಿಂಗು ಕಲ್ಕುಂದ ಹಾಗೂ ಡಾ.ಗಣನಾಥ ಎಕ್ಕಾರ್ ಉಪಸ್ಥಿತರಿರುವರು.
ಮಧ್ಯಾಹ್ನ 1.30 ಕ್ಕೆ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯಲ್ಲಿ ನಡೆಯುವ ಆರಾಧನಗೋಷ್ಠಿಯಲ್ಲಿ ಚಿಂತಕರಾದ ಪರಮಾನಂದ ಸಾಲ್ಯಾನ್ ಮತ್ತು ಶ್ರೀಕಾಂತ ಶೆಟ್ಟಿ ಕಾರ್ಕಳ ವಿಚಾರ ಮಂಡನೆ ಮಾಡಲಿದ್ದು, ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ಉಪಸ್ಥಿತರಿರುವರು.
ಸಂಜೆ 3 ಗಂಟೆಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದ್ದು, ಪ್ರೊ.ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿನಂದನಾ ನುಡಿಯನ್ನಾಡಲಿದ್ದಾರೆ. ಅಭಿನಂದನಾ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಕಾರ್ಯಾಧ್ಯಕ್ಷ ರಘುನಾಥ ಮಾಬಿಯಾನ್ ಜಂಟಿಯಾಗಿ ಅಭಿನಂದನೆ ಮಾಡಲಿದ್ದಾರೆ. ಕುದ್ರೋಳಿ ದೇಗುಲದ ಕೋಶಾಧಿಕಾರಿ ಪದ್ಮರಾಜ್ ಆರ್. 'ಸಿರಿ ಕುರಲ್' ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಲಿದ್ದು, ಮೇನಾಳಗುತ್ತು ಕಿಶನ್ ಜೆ.ಶೆಟ್ಟಿ, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಜಾನಪದ ವಿದ್ವಾಂಸ ಡಾ. ವೈ.ಎನ್.ಶೆಟ್ಟಿ ಉಪಸ್ಥಿತರಿರುವರು.