ಉಡುಪಿ : ಬನ್ನಂಜೆ ಬಾಬು ಅಮೀನ್ 80 - ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ
Posted On:
17-12-2023 11:05AM
ಉಡುಪಿ : ಜಾನಪದ ಸಾಹಿತ್ಯ ಲೋಕದಲ್ಲಿ 21 ಕೃತಿಗಳನ್ನು ನೀಡಿದ ಬನ್ನಂಜೆ ಬಾಬು ಅಮೀನ್ ರವರಿಂದ ಮತ್ತಷ್ಟು ಕೃತಿಗಳು ಮೂಡಿ ಬರಲಿ. ಅವರ ಸಾರ್ವಕಾಲಿಕ ಚಿಂತನೆಯ ಕೃತಿಗಳು ನಮಗೆಲ್ಲರಿಗೂ ಆದರ್ಶ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ. ಶಂಕರ್ ಹೇಳಿದರು.
ಅವರು ರವಿವಾರ ಬನ್ನಂಜೆಯ ನಾರಾಯಣ ಗುರು ಸಭಾಂಗಣದಲ್ಲಿ ಖ್ಯಾತ ಜಾನಪದ ವಿದ್ವಾಂಸ, ಸಾಹಿತಿ ಬನ್ನಂಜೆ ಬಾಬು ಅಮೀನ್ ಅವರಿಗೆ 80 ತುಂಬುತ್ತಿರುವ ಸಂದರ್ಭದಲ್ಲಿ ಅವರ ಅಭಿಮಾನಿ ಬಳಗ ವತಿಯಿಂದ ಜರಗಿದ ಅಭಿನಂದನೆ ಕಾರ್ಯಕ್ರಮ 'ಸಿರಿ ತುಪ್ಪೆ' ಯನ್ನು ತುಳಸಿ ಕಟ್ಟೆಯ ತುಳಸಿ ಗಿಡಕ್ಕೆ ತೆನೆ ಕಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬನ್ನಂಜೆಯವರ 'ತುಳುನಾಡ ಸುತ್ತಮುತ್ತ' ಹಾಗೂ 'ಗರೋಡಿ ಒಂದು ಚಿಂತನೆ' ಎಂಬ ಎರಡು ಪುಸ್ತಕಗಳ ಅನಾವರಣವನ್ನು ಹಿರಿಯ ಸಾಹಿತಿ ರೋಹಿಣಿ ಬಿ.ಎಂ. ರೋಹಿಣಿ ಬಿಡುಗಡೆಗೊಳಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಹಿದಾಯತುಲ್ಲ ಸಾಹೇಬ್ ಎರ್ಮಾಳು ಅವರಿಂದ ನಾಗಸ್ವರ ವಾದನ, ರವಿಕುಮಾರ್ ಕಪ್ಪೆಟ್ಟು ಅವರ ಡೋಲು ವಾದನ, ಎಡ್ಮೇರಿನ ಬೊಗ್ಗು ಪರವರಿಂದ ಪಾಡ್ದನ ನೆರವೇರಿತು.
ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ, ವಿವಿಧ ಗೋಷ್ಠಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಮುಂದುವರಿಯಿತು.
ಜಾನಪದ ವಿದ್ವಾಂಸ, ಸಾಹಿತಿ ಬನ್ನಂಜೆ ಬಾಬು ಅಮೀನ್, ಸಾಹಿತಿ ಬಿ.ಎಂ.ರೋಹಿಣಿ, ಅಕ್ಷಯ ಮಾಸ ಪತ್ರಿಕೆ ಸಂಪಾದಕ ಹರೀಶ್ ಹೆಜಮಾಡಿ, ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ರಘುನಾಥ ಮಾಬಿಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಭಾಸ್ಕರ್ ಸ್ವಾಗತಿಸಿದರು.