ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎರ್ಮಾಳು : ಶ್ರೀನಿಧಿ ಮಹಿಳಾ ಮಂಡಳಿಯ 39ನೇ ವಾರ್ಷಿಕೋತ್ಸವ

Posted On: 18-12-2023 08:03PM

ಎರ್ಮಾಳು : ಇಲ್ಲಿನ ಶ್ರೀನಿಧಿ ಮಹಿಳಾ ಮಂಡಳಿಯ 39 ನೇ ವಾರ್ಷಿಕೋತ್ಸವವು ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಮಾಜಿ ಅಧ್ಯಕ್ಷೆ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್ ಮಾತನಾಡಿ, ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯು ಕಲೆ, ಸಂಸ್ಕೃತಿಯ ರಾಯಭಾರಿಯಂತೆ ಕಾರ್ಯ ಚಟುವಟಿಕೆಯನ್ನು ನಡೆಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಮನೆ ಮಾತಾಗಿ ಬೆಳೆದು ನಿಂತ ಸಂಸ್ಥೆಯಾಗಿದೆ. ಸಮಾಜಮುಖಿ ಚಟುವಟಿಕೆ, ಸಂಸ್ಕಾರ, ಸಂಸ್ಕೃತಿ, ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಇನ್ನಷ್ಟು ಪ್ರಭಾವಶಾಲಿಯಾಗಿ ಕಾರ್ಯೋನ್ಮುಖವಾಗಲಿ ಎಂದರು.

ಕ.ಸಾ.ಪ. ಕಾಪು ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮಾತನಾಡಿ, ಸಮಾಜದ ಸಂಸ್ಕಾರಯುತ ಬೆಳವಣಿಗೆಗೆ ಮಾತೃಸ್ಥಾನವು ಮತ್ತಷ್ಟು ಜಾಗ್ರತಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಮಾತೆಯರೇ ಒಗ್ಗೂಡಿ ಬೆಳೆದು ನಿಂತ ಸಂಸ್ಥೆಯು ಸಮಾಜಕ್ಕೆ ಮಾತೃಸ್ಥಾನದಲ್ಲಿ ನಿಂತು ಮಾರ್ಗದರ್ಶ ಮಾಡಬೇಕಿದೆ ಎಂದರು. ಜಿ.ಪಂ. ಮಾಜಿ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ ಮಾತನಾಡಿ, ಪ್ರತಿಭೆಗಳಿಗೆ ಉತ್ತಮ ಅವಕಾಶವನ್ನು ನೀಡುವ ಜೊತೆಗೆ ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ನೀಡುವ ಮಹಿಳಾ ಶಕ್ತಿಯಾಗಿ ಶ್ರೀನಿಧಿ ಮಹಿಳಾ ಮಂಡಳಿಯು ಸಮಾಜವನ್ನು ಉತ್ತಮವಾಗಿ ಕಟ್ಟುವಲ್ಲಿ ಮಹತ್ತರ ಕೊಡುಗೆಯನ್ನು ನೀಡಿರುವುದು ಶ್ಲಾಘನೀಯ ಎಂದರು.

ಸಾಧಕರಾದ ಉಪನ್ಯಾಸಕಿ, ಮಂಗಳೂರು ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಎನ್‌ಎಸ್‌ಎಸ್‌ವಿಭಾಗಾಧಿಕಾರಿ ಸವಿತಾ ಎರ್ಮಾಳು, ಶೈಕ್ಷಣಿಕ ಸಾಧಕಿ ಹರ್ಷಾ ಜಿ. ರಾವ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುರೇಖಾ ಚಂದ್ರಶೇಖರ್, ಶ್ರೀನಿಧಿ ಮಹಿಳಾ ಮಂಡಳಿಯ ಅಧ್ಯಕ್ಷೆ ಅಮಣಿ ಕುಂದರ್, ಕಾರ್ಯದರ್ಶಿ ವಿಮಲಾ ಕೆ. ಸಾಲ್ಯಾನ್, ಕೋಶಾಧಿಕಾರಿ ಶಕುಂತಲಾ, ಜೊತೆ ಕಾರ್ಯದರ್ಶಿ ರೇಖಾ ಶೆಟ್ಟಿ, ಉಪಾಧ್ಯಕ್ಷೆ ಮಾಲತಿ ಜೆ. ಶೆಟ್ಟಿ ಇದ್ದರು.

ಅಮಣಿ ಕುಂದರ್ ಸ್ವಾಗತಿಸಿದರು. ಶಕುಂತಲಾ ವಂದಿಸಿದರು. ಶಶಿಕಲಾ ನವೀನ್ ಬಹುಮಾನಿತರನ್ನು ಪರಿಚಯಿಸಿದರು. ಶಿಕ್ಷಕಿ ಸುಪ್ರೀತಾ ಕಿಶೋರ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಮಾಜಿ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ ಸಮಾರಂಭವನ್ನು ನಿರೂಪಿಸಿದರು. ಶ್ರೀನಿಧಿ ಮಹಿಳಾ ಮಂಡಳಿಯ ಸದಸ್ಯೆಯರಿಂದ ಬಳಿಕ ನೃತ್ಯ ವೈಭವ ಮತ್ತು ಶೀಲಾ ಕೆ. ಶೆಟ್ಟಿ ವಿರಚಿತ ತುಳುವ ಬೀರೆರ್ ಕೋಟಿ ಚೆನ್ನಯೆರ್ ತುಳು ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು.