ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಂಟಕಲ್ಲು : ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ; ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಸನ್ಮಾನ

Posted On: 24-12-2023 08:49PM

ಬಂಟಕಲ್ಲು : ಅಂದಾಜು 80 ಲಕ್ಷ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಬಂಟಕಲ್ಲು ಶ್ರೀಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಭೆಯನ್ನು ರವಿವಾರ ಸಮಿತಿಯ ಅಧ್ಯಕ್ಷರು ಹಾಗೂ ಬಂಟಕಲ್ಲು ನಿವೃತ್ತ ಅಂಚೆ ಪಾಲಕ ಬಿ.ಭಾಸ್ಕರ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ರವಿವಾರ ದೈವಸ್ಥಾನದ ಸಾನಿಧ್ಯದಲ್ಲಿ ಜರುಗಿತು.

ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ದೇವಸ್ಥಾನ, ದೈವಸ್ಥಾನ, ಇನ್ನಿತರ ಶೃದ್ಧಾಕೇಂದ್ರಗಳು ಹಿರಿಯರು ನಮಗೆ ನೀಡಿದ ಬಳುವಳಿಯಾಗಿದ್ದು, ಅದನ್ನು ಉಳಿಸಿ ಅಭಿವೃದ್ಧಿ ಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪರಮಾತ್ಮನ ಅನುಗ್ರಹ ಇಲ್ಲದಿದ್ದರೆ ಯಾವ ಕಾರ್ಯವೂ ಆಗಲ್ಲ. ಧರ್ಮ ಇದ್ದಲ್ಲಿ ಭಗವಂತನ ಸಾನಿಧ್ಯ ಇರುತ್ತದೆ. ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರತೀ ಮನೆಯ ಸಹಭಾಗಿತ್ವ ಅಗತ್ಯ. ಸತ್ಯ, ಧರ್ಮ, ನಿಷ್ಠೆ, ಪ್ರಾಮಾಣಿಕತೆ ಇದ್ದಲ್ಲಿ ದೇವ, ದೈವರ ಸಾನಿಧ್ಯ ಇರುತ್ತದೆ. ಜೀರ್ಣೋದ್ದಾರ ಕಾರ್ಯದಲ್ಲಿ ತಮ್ಮೊಂದಿಗೆ ತಾನೂ ಕೈಜೋಡಿಸುವುದಾಗಿ ಸ್ಪೂರ್ತಿ ತುಂಬಿದರು. ವಿಶೇಷ ಅಹ್ವಾನಿರಾಗಿ ಉಪಸ್ಥಿತರಿದ್ದ ಸ್ಥಳೀಯ ಕೊಡುಗೈದಾನಿಗಳಾದ ಪ್ರಫುಲ್ಲಾ ಜಯ ಶೆಟ್ಟಿ ಮಾತನಾಡಿ ಸಮಿತಿ ಎಂದರೆ ಒಗ್ಗಟ್ಟು. ದೈವಸ್ಥಾನದ ಜೀರ್ಣೋದ್ಧಾರ ನಮಗೆ ಭಗವಂತ ಕೊಟ್ಟ ಅವಕಾಶ. ಹತ್ತು ಜನರಿಗೆ ಖುಷಿಯಾಗುವ ಕೆಲಸದಿಂದ ಆರೋಗ್ಯವೃದ್ಧಿಯಾಗುತ್ತದೆ. ಎಲ್ಲರೂ ಜೊತೆಯಾಗಿ ಈ ಪುಣ್ಯ ಕಾರ್ಯ ಮಾಡುವ ಎಂದರು.

ಈ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿರವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ವಾರ್ಡ್ ಪ್ರತಿನಿಧಿ ಕೆ.ಆರ್.ಪಾಟ್ಕರ್, ದೈವಸ್ಥಾನದ ಮಧ್ಯಸ್ಥಗಾರ ರಾಮಕೃಷ್ಣ ಪಾಟ್ಕರ್(ಅಪ್ಪು ನಾಯಕ್), ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿದರು. ವೇದಿಕೆಯಲ್ಲಿ ಬಂಟರ ಸಂಘದ ಶಿರ್ವ ಘಟಕದ ಅಧ್ಯಕ್ಷ ವೀರೇಂದ್ರ ಶೆಟ್ಟಿ ಪಂಜಿಮಾರು, ಪಂಜಿಮಾರು ತೇರಾಡಿ ಲಕ್ಷ್ಮಿ ಸುಧಾಕರ ಶೆಟ್ಟಿ, ಸಂದೀಪ್ ಬಂಗೇರ ಉಪಸ್ಥಿತರಿದ್ದರು.

ದೈವಸ್ಥಾನದ ಗುರಿಕಾರ ಶಂಕರ ಪದಕಣ್ಣಾಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸತ್ಯಸಾಯಿ ಪ್ರಸಾದ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಎಸ್ ವಂದಿಸಿದರು. ಸಭೆಯಲ್ಲಿ ಗೌರವ ಸಲಹೆಗಾರರಾದ ವಾಸು ಕೆ. ಸುಭಾಸ್‌ನಗರ, ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಕೆ.ಸಿ, ಸಂಘಟನಾ ಕಾರ್ಯದರ್ಶಿ ದಿನೇಶ್ ಎಸ್.ಕೆ, ಪ್ರಧಾನ ಅರ್ಚಕ ಸಂತೋಷ್, ಭಾನುಮತಿ ಶಂಕರ್, ರೋಹಿಣಿ ಚಂದ್ರಶೇಖರ್ ಮತ್ತು ಭಕ್ತವೃಂದದವರು ಉಪಸ್ಥಿತರಿದ್ದರು.