ಪಡುಬಿದ್ರಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಪಡುಬಿದ್ರಿ ಇದರ ನೇತೃತ್ವದಲ್ಲಿ ಸೋಮವಾರ ಭೀಮಾ ಕೊರೆಗಾಂವ್ ವಿಜಯೋತ್ಸವದ ಪ್ರಯುಕ್ತ ಶೌರ್ಯ ದಿನಾಚರಣೆ ಪಡುಬಿದ್ರಿಯಲ್ಲಿ ನಡೆಯಿತು.
ಈ ಸಂಧರ್ಭ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅಶೋಕ್ ಕೊಂಚಾಡಿಯವರು ದೇಶದಲ್ಲಿ ಕೇಂದ್ರ ಸರ್ಕಾರ ಏಕರೂಪ ನಾಗರಿಕ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಮೂಲಕ ದಲಿತರು, ಶೋಷಿತರ ಮೀಸಲಾತಿಯನ್ನು ದುರ್ಬಲಗೊಳಿಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಅಲ್ಲದೇ ಸಂವಿಧಾನವನ್ನು ಬದಲಿಸಿ ಮನುಸ್ಮೃತಿಯನ್ನು ಜಾರಿಗೊಳಿಸಿ ಇಡೀ ದೇಶದಲ್ಲಿ ಪೇಶ್ವೆಗಳ ಮಾದರಿಯ ಆಡಳಿತವನ್ನು ಪ್ರಾರಂಭಿಸಿ ದಲಿತರನ್ನು ಮತ್ತೆ ಶೋಷಣೆಗೆ ಒಳಪಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಸಂಚಾಲಕರಾದ ಸುಂದರ್ ಮಾಸ್ಟರ್ ಮಾತನಾಡಿ ಸರ್ಕಾರದ ಮಂತ್ರಿಗಳು ಸಂವಿಧಾನವನ್ನು ಬದಲಿಸುವ ಹೇಳಿಕೆ ನೀಡುತ್ತಿದ್ದಾರೆ ಒಂದುವೇಳೆ ಸಂವಿಧಾನ ಬದಲಿಸಲು ಕೈ ಹಾಕಿದ್ದಲ್ಲಿ ಮತ್ತೊಂದು ಕೊರೆಗಾಂವ್ ಯುದ್ಧಕ್ಕೆ ತಯಾರಾಗಿ ಎಂದು ಎಚ್ಚರಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಭಿರ್ತಿ ಮಾತಾಡಿ ಕೊರೆಗಾಂವ್ ವಿಜಯೋತ್ಸವ ಭಾರತದ ಮೂಲ ನಿವಾಸಿಗಳ ಸ್ವಾಭಿಮಾನದ ವಿಜಯೋತ್ಸವ ಇದನ್ನು ಪ್ರತೀ ವರ್ಷ ದಲಿತರು ವಿಜೃಂಭಣೆಯಿಂದ ಆಚರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭ ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ್ ಉಪ್ಪುರ್, ಭಾಸ್ಕರ್ ಮಾಸ್ಟರ್, ಶ್ರೀಧರ್ ಉಡುಪಿ, ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ್, ಸುರೇಶ್ ಪಾದೆಬೆಟ್ಟು, ಸುಕೇಶ್, ಆಶಾ, ಸುರೇಶ್ ಎರ್ಮಾಳ್, ರಮೇಶ್, ರವೀಂದ್ರ ಬಂಟಕಲ್, ನಾಗೇಶ್ ಉರ್ವ, ಶಿವಾನಂದ್ ಕಲ್ಲಟ್ಟೆ, ಹರಿಶ್ಚಂದ್ರ, ಉಷಾ, ನಯನ ಮುಂತಾದವರು ಉಪಸ್ಥಿತಿಯಿದ್ದರು.
ಪಡುಬಿದ್ರಿ ಸಂಚಾಲಕ ಕೀರ್ತಿಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೋಶಾಧಿಕಾರಿ ವಿಠ್ಠಲ್ ಮಾಸ್ಟರ್ ವಂದಿಸಿದರು.