ಕಾಪು : 92 ಹೇರೂರು ಫ್ರೆಂಡ್ಸ್ ಕ್ಲಬ್ ಪ್ರಥಮ ವಾರ್ಷಿಕೋತ್ಸವ ; ಸನ್ಮಾನ
Posted On:
03-01-2024 08:50PM
ಕಾಪು : ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 92 ಹೇರೂರು ಫ್ರೆಂಡ್ಸ್ ಕ್ಲಬ್ ಇದರ ಪ್ರಥಮ ವಾರ್ಷಿಕೋತ್ಸವ ಸೋಮವಾರ ಹೇರೂರು ಭಜನಾ ಮಂದಿರದ ಸಾರ್ವಜನಿಕ ರಂಗ ಮಂಟಪದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ ಸ್ಥಳೀಯ ಸಂಘಟಿತ ಯುವಶಕ್ತಿಯನ್ನು ಧನಾತ್ಮಕವಾಗಿ ಬಳಸಿಕೊಂಡಾಗ ಸಾಂಘಿಕಶಕ್ತಿ ಜಾಗೃತವಾಗಿ ಸ್ಥಳೀಯ ಅನೇಕ ಸಮಸ್ಯೆಗಳಿಗೆ ಪರಿಹಾರ, ಊರಿನ ಅಭಿವೃದ್ಧಿ, ಪ್ರತಿಭಾ ವಿಕಸನ, ಸಮರ್ಥ ನಾಯಕತ್ವ ಬೆಳೆಯುತ್ತದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ರಕ್ತದಾನ, ಬಡ ಕುಟುಂಬಕ್ಕೆ ಸೂರು ಒದಗಿಸಿರುವುದು ಈ ಸಂಘಟನೆಯ ಸೇವಾ ಮನೋಭಾವನೆಗೆ ಉತ್ತಮ ನಿರ್ದಶನವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸ್ಥಳೀಯ ಸಮಾಜ ಸೇವಕ ಮಾಧವ ಆಚಾರ್ಯ ಮಾತನಾಡಿ ಒಳ್ಳೆಯ ಕೆಲಸಗಳಿಗೆ ಅಡೆತಡೆಗಳು ಸಾಮಾನ್ಯ. ಅದನ್ನು ಮೀರಿ ಮುನ್ನಡೆಯುವ ದೃಢ ಸಂಕಲ್ಪ ಬೇಕು. ಸಮಾಜ ಸೇವೆ ದೇವರ ಸೇವೆಯಾಗಿದ್ದು, ಹಿರಿಯರ ಆದರ್ಶ, ಧಾರ್ಮಿಕ ಚಿಂತನೆಗಳಿಗೆ ಒತ್ತು ನೀಡಿ ಮುನ್ನಡೆಯುವಂತೆ ಯುವ ಸಮೂಹಕ್ಕೆ ಕರೆಯಿತ್ತರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಉಪನ್ಯಾಸಕಿ ಅನುಪಮಾ ಜೋಗಿ ಮಾತನಾಡಿ ಹುಟ್ಟೂರ ವೇದಿಕೆಯಲ್ಲಿ ಮಾತನಾಡುವ ಅವಕಾಶಕ್ಕೆ ಸಂತಸ ವ್ಯಕ್ತಪಡಿಸಿ, ದೇಶದ ಭವಿಷ್ಯ ಯುವ ಶಕ್ತಿಯ ಬುನಾದಿಯ ಮೇಲೆ ನಿಂತಿದೆ. ವ್ಯಕ್ತಿಯ ಉನ್ನತಿಗೆ, ಮಾನವೀಯ ಮಲ್ಯಾಧಾರಿತ ಪ್ರಾಥಮಿಕ ಶಿಕ್ಷಣವೇ ಮೂಲವಾಗಿದ್ದು, ಅಂತಹ ಗುರುಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಕಳೆದ 25 ವರ್ಷಗಳಿಂದ ತಮ್ಮ ಜೀವದ ಹಂಗು ತೊರೆದು, ಆಕಸ್ಮಿಕ ಘಟನೆಗಳು ಯಾ ತುರ್ತು ಸಂದರ್ಭದಲ್ಲಿ ಸ್ಥಳೀಯರ ಪೋನ್ ಕರೆಗೆ ತಕ್ಷಣ ಸ್ಪಂದಿಸಿ ಉತ್ತಮ, ಮಾದರಿ ಸೇವೆಯನ್ನು ನೀಡಿ, ಪ್ರಾಮಾಣಿಕ ಕರ್ತವ್ಯ ನಿಷ್ಠೆಯಿಂದ ಗ್ರಾಮಸ್ಥರ ಪ್ರೀತಿ ವಿಶ್ವಾಸವನ್ನು ಗಳಿಸಿ ಜನಾನುರಾಗಿರುವ ಈ ಭಾಗದ ಮೆಸ್ಕಾಂ ಲೈನ್‌ಮ್ಯಾನ್‌ಗಳಾದ ಸುನಿಲ್ ಶೆಟ್ಟಿ, ವಸಂತ ಕೊಟ್ಯಾನ್‌ರವರಿಗೆ "ಹೊಸ ವರ್ಷದ ಗೌರವ" ನೀಡಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಜೋಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಬಂಟಕಲ್ಲು ಮಾಧವ ಕಾಮತ್, ಶ್ರೀಗುರು ರಾಘವೇಂದ್ರ ಭಜನಾ ಮಂಡಳಿ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಯಶಸ್ವಿ ಉದ್ಯಮಿ ಡೇನಿಸ್ ಮತಾಯಸ್, ಕಲಾ ವೈಕರಿ ಅಭಿನಯ ಸಾಮ್ರಾಟ್ ಪ್ರಭಾಕರ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ಗಣಪತಿ ಆಚಾರ್ಯ ಹೇರೂರು ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿವಿಧ ಸ್ಫರ್ಧಾವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ರವಿ ದೇವಾಡಿಗ ವಿಜೇತರನ್ನು ಪರಿಚಯಿಸಿದರು. ಫ್ರ‍್ರೆಂಡ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ದೀಪಕ್ ಕೊಟ್ಯಾನ್, ಕಾರ್ಯದರ್ಶಿ ಸುಮಿತ್ ಶೆಟ್ಟಿ, ಕೋಶಾಧಿಕಾರಿ ಸುಧೀರ್ ಹೇರೂರು ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ದೀಕ್ಷಾ ವರದಿ ವಾಚಿಸಿದರು. ವಿಜಯ್ ಧೀರಜ್, ದಿವ್ಯಜ್ಯೋತಿ ನಿರೂಪಿಸಿದರು. ಕು.ಅಶ್ಮಿತಾ ವಂದಿಸಿದರು.
ನಂತರ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಲಾ ಚಾವಡಿ (ರಿ.) ಅಂಬಲಪಾಡಿ ಉಡುಪಿ ಇವರಿಂದ ತುಳು ಹಾಸ್ಯ ನಾಟಕ "ಮೋಕೆದ ಮದಿಮಾಲ್" ಪ್ರದರ್ಶನಗೊಂಡಿತು.