ಪಲಿಮಾರು : ಪ್ರೌಢ ಶಾಲೆ, ಕಾಲೇಜು ವಿಭಾಗದ ವಾರ್ಷಿಕೋತ್ಸವ ; ಪ್ರತಿಭಾ ಪುರಸ್ಕಾರ
Posted On:
06-01-2024 05:16PM
ಪಲಿಮಾರು : ಮಕ್ಕಳಲ್ಲಿರುವ ಅದ್ಭುತ ಶಕ್ತಿಯನ್ನು ಹೊರತರುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ಶಿಕ್ಷಣದ ಮೂಲಕ ಸಂಸ್ಕೃತಿಯ ಅರಿವು ಮೂಡುತ್ತದೆ. ಸಂಸ್ಕಾರದ ಕೊರತೆಯಿಂದ ಕ್ರೌರ್ಯ ಬೆಳೆಯುತ್ತದೆ. ಈಗ ಮಾರ್ಕ್ ಮತ್ತು ರ‍್ಯಾಂಕ್‌ನ ಕಡೆಗೆ ಹೋಗುತ್ತಿದ್ದೇವೆ. ವಿದ್ಯಾರ್ಥಿಗಳನ್ನು ಸದಾ ಜಾಗೃತ ಮನಸ್ಸಿನಲ್ಲಿಡುವ ಕಾರ್ಯ ನಡೆಯಬೇಕು. ಶಿಕ್ಷಣ ಮತ್ತು ಪರಿಸರ ದಿಂದ ಬದುಕುವ ಕಲೆಯ ಜಾಗೃತಿಯಾಗುತ್ತದೆ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನುಡಿದರು.
ಅವರು ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನ : ಈ ಸಂದರ್ಭದಲ್ಲಿ ಶಾಲಾ ಹಳೆವಿದ್ಯಾರ್ಥಿಗಳು, ದಾನಿಗಳಾದ ಎಬಿಸಿಡಿ ಮತ್ತು ಇ ಟ್ರಸ್ಟ್ ಇನ್ನಾ ಇದರ ಅಧ್ಯಕ್ಷರಾದ ಇನ್ನಾ ಚಂದ್ರಕಾಂತ್ ರಾವ್ ಮತ್ತು ಹಳೆವಿದ್ಯಾರ್ಥಿ, ಬೆಂಗಳೂರಿನ ಉದ್ಯಮಿಗಳು, ಆದಿತ್ಯ ಟ್ರಾವೆಲ್ಸ್ ಸಂಸ್ಥೆಯ ಮುಖ್ಯಸ್ಥರಾದ ಗೋಕುಲ್ ಪಲಿಮಾರು, ಬಹುಮುಖ ಪ್ರತಿಭಾ ಸಂಪನ್ನೆ ಹಳೆ ವಿದ್ಯಾರ್ಥಿನಿ ಕು.ಸಯ್ಯಮಿ ಮತ್ತು ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಹಾಗೂ ಕನ್ನಡದಲ್ಲಿ ೧೦೦ ಅಂಕ ಗಳಿಸಿದ ಕು.ಸುಮಯ್ಯ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹಳೆವಿದ್ಯಾರ್ಥಿನಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷರಾದ ರಾಯೇಶ್ವರ ಪೈ, ನಿಕಟಪೂರ್ವ ಗ್ರಾ,ಪಂ. ಅಧ್ಯಕ್ಷೆ ಗಾಯತ್ರಿ ಡಿ.ಪ್ರಭು, ಸದಸ್ಯರುಗಳಾದ ಪ್ರವೀಣ್ ಕುಮಾರ್, ರಶ್ಮಿ ಪೂಜಾರಿ, ಸುಜಾತಾ, ಹಳೆವಿದ್ಯಾರ್ಥಿ, ಉದ್ಯಮಿ ರವೀಂದ್ರ ಪ್ರಭು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶೋಭಾ, ವಿದ್ಯಾರ್ಥಿ ನಾಯಕರುಗಳಾದ ಅನನ್ಯಾ, ಯಶಸ್ ವೇದಿಕೆಯಲ್ಲಿದ್ದರು.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಸನ್ಮಾನಿತರನ್ನು ಪರಿಚಯಿಸಿ, ಸ್ವಾಗತಿಸಿದರು. ಪ್ರಾಢ ಶಾಲಾ ವಿಭಾಗದ ಹಿರಿಯ ಶಿಕ್ಷಕಿ ಸುನೀತಾ ವರದಿ ಓದಿದರು. ಶಿಕ್ಷಕರಾದ ಪಿ.ಸುಧಾಕರ ಶೆಣೈ, ದೈಹಿಕ ಶಿಕ್ಷಣ ಶಿಕ್ಷಕಿ ಅಮೃತಾ, ಶಿಕ್ಷಕರಾದ ಶಿವಾನಂದ್, ನಿಶಾ ಪರಿಚಯಿಸಿದರು. ಕನ್ನಡ ಉಪನ್ಯಾಸಕಿ ಜ್ಯೋತಿ ನಿರೂಪಿಸಿದರು. ಶಿಕ್ಷಕರಾದ ಪ್ರಸನ್ನ ವಂದಿಸಿದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.