ಉಚ್ಚಿಲ : ಅಮೇರಿಕಾದ ಗ್ರಾಮೀಣ ಭಾಗದ ಮಹಿಳಾ ಸಬಲೀಕರಣದ ಉದ್ದೇಶದಿಂದ ಕಳೆದ 11 ವರ್ಷಗಳಿಂದ ಅಲ್ಲಿನ ಅಧ್ಯಯನಶೀಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತಂದು ಇಲ್ಲಿನ ಮಹಿಳಾ ಸಬಲೀಕರಣದ ಚಿತ್ರಣವನ್ನು ಅವರಿಗೆ ಮನದಟ್ಟು ಮಾಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಅಮೇರಿಕಾದ ಪೆನೊಸೋಲೋನಿಯಾ ವಿಶ್ವವಿದ್ಯಾನಿಲಯದ ಪ್ರೊ. ಡಾ. ಫಮೀದಾ ಹ್ಯಾಂಡಿ ಹೇಳಿದ್ದಾರೆ.
ಅವರು ಅಮೇರಿಕಾದ ವಿದ್ಯಾರ್ಥಿಗಳ ನಿಯೋಗದೊಂದಿಗೆ ಇಲ್ಲಿನ ಸಹಕಾರಿ ಸೊಸೈಟಿಗಳ ಸ್ವಸಹಾಯ ಸಂಘಗಳ ಅಧ್ಯಯನಕ್ಕಾಗಿ ಶನಿವಾರ ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಉಚ್ಚಿಲ ಶಾಖೆಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮ ಜತೆ ಮಾತನಾಡಿದರು.
ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಅತಿಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಪ್ರೊ.ಫಮೀದಾ ಹ್ಯಾಂಡಿಯವರನ್ನು ಸನ್ಮಾನಿಸಿ ಗೌರವಿಸಿದರು. ತದನಂತರ ಅಮೆರಿಕಾ ತಂಡದ ಸದಸ್ಯರು ವಿಚಾರ ವಿನಿಮಯ ನಡೆಸಿದರು.
ಈ ಸಂದರ್ಭ ನವೋದಯ ಸ್ವಸಹಾಯ ಸಂಘಗಳ ಅಧಿಕಾರಿ ಹರಿನಾಥ್, ಬೆಳಪು ಸಂಘದ ನಿರ್ದೇಶಕರಾದ ದ್ಯುಮಣಿ ಭಟ್, ಪಾಂಡು ಶೆಟ್ಟಿ, ಪಾಂಡು ಶೇರಿಗಾರ್, ಮೀನಾ ಪೂಜಾರ್ತಿ, ಶೋಭಾ ಭಟ್, ಸುಗುಣಾ ಅಂಚನ್, ಸಂಘದ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ, ವಿವಿಧ ಶಾಖಾ ಪ್ರಬಂಧಕರು ಉಪಸ್ಥಿತರಿದ್ದರು.
ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.