ಕಾಪು : ತಾಲೂಕು ಮಟ್ಟದ ಕೊರಗ ಸಮುದಾಯದ ಕುಂದು ಕೊರತೆ ಸಭೆ
Posted On:
14-01-2024 08:32AM
ಕಾಪು : ತಾಲೂಕು ಮಟ್ಟದ ಕೊರಗ ಸಮುದಾಯದ ಕುಂದು ಕೊರತೆ ಸಭೆ
ಕಾಪು ತಾಲೂಕಿನ ಆಡಳಿತ ಸೌಧದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಶೀಲ್ದಾರ್ ಡಾ.ಪ್ರತಿಭಾ ಆರ್ ನಾಗರೀಕ ಸಮಾಜದಿಂದ ದೂರ ಉಳಿದ ಕೊರಗ ಸಮಾಜ ಹಾಗೂ ಇದೇ ರೀತಿ ಶೋಷಿತ ವರ್ಗಗಳಿಗೆ ಸೇರಿದ ಸಮುದಾಯಗಳಿಗೆ ಮೂಲಭೂತ ಸೌಕರ್ಯ ಕೊಟ್ಟು ಜೊತೆಗೆ ಅವರಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಹೊಣೆಯಾಗಿದೆ. ಸದ್ಯದಲ್ಲಿಯೇ ತಾಲೂಕು ಪಂಚಾಯತ್ ಸಹಯೋಗದಲ್ಲಿ ಸಹಪಂಕ್ತಿ ಭೋಜನ ಏರ್ಪಡಿಸಿ ಸಮಾನತೆ ಸಾಧಿಸಿ ಕೊರಗರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಲಾಗುವುದು. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಹೆಲ್ತ್ ಕ್ಯಾಂಪ್ ನಡೆಸಲಾಗುವುದು ಹಾಗೂ ಆಯುಷ್ಮಾನ್ ಕಾಡುಗಳ ವಿತರಣೆ ಮಾಡಲಾಗುವುದು.
ಕೊರಗ ಸಮುದಾಯದವರ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹಾರ ಮಾಡುವ ಭರವಸೆ ನೀಡಿದರು. ಸಮಸ್ಯೆಗಳಿದ್ದರೆ ನೇರವಾಗಿ ಕಚೇರಿಗೆ ಬಂದು ತಹಶೀಲ್ದಾರ್ ರವರನ್ನು ಖುದ್ದಾಗಿ ಭೇಟಿ ಮಾಡಬಹುದು ಎಂದರು.
ಸರಕಾರಿ ಕೆಲಸಗಳು ಕಾಲಕ್ರಮೇಣ ಎಲ್ಲವೂ ಕಂಪ್ಯೂಟರೀಕರಣ ಆಗುತ್ತಿರುವುದರಿಂದ ಕೆಲವು ದಾಖಲೆಗಳು ಇಲ್ಲದಿರುವುದರಿಂದ ಮೇಲಾಧಿಕಾರಿಗಳ ನಿರ್ದೇಶನದಂತೆ ಕೊರಗ ಜನಾಂಗದವರ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲಾ ಅವಶ್ಯ ಪ್ರಯತ್ನಗಳನ್ನು ಮಾಡಲಾಗುವುದು ಕೊರಗರು ಶಿಕ್ಷಣವಂತರಾಗಿ ಜಾಗೃತಿ ಮೂಡಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು. ಕೊರಗರ ವಾಸ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ನಿವೇಶನ, ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.
ನಮ್ಮ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಹಲವಾರು ಸಮುದಾಯಗಳಿರಬಹುದು ಅಂತಹ ಸಮುದಾಯದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಬೇಕು ಎಂದಾಗ ಖುದ್ದಾಗಿ ಅಧಿಕಾರಿಗಳಾದ ನಾವು ಇಂತಹ ಸಮುದಾಯಗಳ ಹಾಡಿ(ಕ್ಯಾಂಪ್) ಗಳಿಗೆ ಭೇಟಿ ನೀಡಿ, ಅವರ ನೈಜ ಪರಿಸ್ಥಿತಿಯನ್ನು ನೋಡುವುದರ ಮೂಲಕ ಅವರಿಗೆ ನಾಗರೀಕತೆ ಬಗ್ಗೆ ತಿಳಿಹೇಳುವುದರ ಮೂಲಕ, ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳಿವೆ, ಆ ಸೌಲಭ್ಯ ಪಡೆದುಕೊಳ್ಳಬೇಕಾದರೆ ಮೊದಲು ಶಿಕ್ಷಣವಂತರಾಗಿ, ಶಿಕ್ಷಣ ಬಂದರೆ ಸರ್ಕಾರದಿಂದ ಬರುವ ಸೌಲಭ್ಯಗಳು ಏನೆಲ್ಲಾ ಬಂದಿವೆ ಅನ್ನೋದು ನಿಮಗೂ ಗೊತ್ತಾಗುತ್ತದೆ, ನೀವು ಉನ್ನತ ಉದ್ಯೋಗ ಮಾಡಲು ಅವಕಾಶಗಳಿವೆ ನಮ್ಮಂತೆ ಅಧಿಕಾರಿಗಳಾಗಿ ಸಾರ್ವಜನಿಕರ ಸೇವೆ ಮಾಡಲು ಅವಕಾಶಗಳು ಸಿಗುತ್ತವೆ ಅಂತ ಅವರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಬೇಕಾಗಿದೆ ಅಂತ ಮಾನವೀಯ ಮೌಲ್ಯಗಳ ಬಗ್ಗೆ ಸವಿಸ್ತಾರವಾಗಿ ಸಭೆಯಲ್ಲಿ ನೆರೆದಿರುವ ಕೊರಗ ಸಮುದಾಯಕ್ಕೂ ಮತ್ತು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕೊರಗರ ಬಗ್ಗೆ ಅಧ್ಯಯನ ಮಾಡಿರುವ ಅಶೋಕ ಶೆಟ್ಟಿಯವರು 2011ರಲ್ಲಿ ಕೊರಗರ ಜನಸಂಖ್ಯೆ 11500 ಇತ್ತು ಈಗ 8500 ಕ್ಕೆ ಇಳಿಕೆ ಆಗಿರುವುದು ವಿಷಾದನೀಯ ಹಾಗೂ ಸಮುದಾಯದವರು ತುಂಬಾ ಹಿಂದುಳಿದವರಾಗಿರುವುದರಿಂದ ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ನಡೆಸಬೇಕಾದ ಕಾರ್ಯಕ್ರಮಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.
ಕೊರಗ ಜನಾಂಗದವರಲ್ಲಿ ನಿವೇಶನ ರಹಿತರ ಒಟ್ಟು 165 ಕುಟುಂಬಗಳನ್ನು ಗುರುತಿಸಿ ಪಟ್ಟಿ ಸಲ್ಲಿಸಲಾಗಿತ್ತು. ಕೂಡಲೇ ಕ್ರಮ ವಹಿಸುವಂತೆ ಅನುಸೂಯರವರು ತಹಶೀಲ್ದಾರ್ ಪ್ರತಿಭಾ ಅವರನ್ನು ವಿನಂತಿಸಿಕೊಂಡರು.
ರೇಷನ್ ಕಾರ್ಡಿನಲ್ಲಿ ತಿದ್ದುಪಡಿ ಮಾಡಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿಕೊಟ್ಟು ಕೂಡಲೇ ಆ ಕುರಿತು ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಕಾಪು ತಾಲೂಕಿನ ಆಹಾರ ಅಧಿಕಾರಿ ಲೀಲಾನಂದರವರು ತಿಳಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್, ತಾಲೂಕು ಆರೋಗ್ಯ ಅಧಿಕಾರಿ ವಾಸುದೇವ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಎಸ್ ಎನ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ರಾಜ್, ಕಂದಾಯ ಇಲಾಖೆಯ ರವಿಕಿರಣ್, ದೀಕ್ಷಿತಾ ಸಭೆಯಲ್ಲಿ ಉಪಸ್ಥಿತರಿದ್ದರು.
ಕಾಪು ತಾಲೂಕು ಕಚೇರಿಯ ದೇವಕಿ ಸ್ವಾಗತಿಸಿದರು. ಕೊರಗ ಮುಖಂಡರಾದ ಸುರೇಶ್ ವಂದಿಸಿದರು.