ಜನವರಿ 20 : 31 ನೇ ವರ್ಷದ ಅಡ್ವೆ ನಂದಿಕೂರು ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳ
Posted On:
19-01-2024 06:19AM
ನಂದಿಕೂರು : ಪಕ್ಷ, ಜಾತಿ, ಧರ್ಮಾತೀತವಾಗಿ ನಡೆಯುವ ಕಂಬಳವು ಜನ ಮಾನಸದಲ್ಲಿ ಮುಟ್ಟುವಂತಾಗಬೇಕು. ಸುಮಾರು ವರ್ಷಗಳಿಂದ ನಡೆದು ಬಂದ ಅಡ್ವೆ ನಂದಿಕೂರು ಕಂಬಳ ಹೊಸ ಪ್ರಯತ್ನದ ಪ್ರಯೋಗಗಳಿಗೆ ಸಾಕ್ಷಿಯಾಗಿದೆ. ಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಡೆಯಲಿದ್ದು ಅನೇಕ ಗಣ್ಯರ ಭಾಗವಹಿಸುವಿಕೆ, ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಜರಗಲಿವೆ. ಜನವರಿ 20, ಶನಿವಾರ ಪೂರ್ವಾಹ್ನ ಗಂಟೆ 8ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಕಾಪು ಶಾಸಕರು, ಅಡ್ವೆ ನಂದಿಕೂರು ಕಂಬಳದ ಗೌರವ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಅಡ್ವೆ ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಜನವರಿ 20, ಶನಿವಾರ ಜರಗಲಿರುವ 31 ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವದ ಬಗ್ಗೆ ನಂದಿಕೂರಿನಲ್ಲಿ ಜರಗಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ತುಳು ಭಾಷೆಯ ಬೆಳವಣಿಗೆಗೆ ಕಂಬಳವೂ ಸಹಕಾರಿಯಾಗಿದ್ದು ಇನ್ನು ಮುಂದೆಯೂ ನಡೆಯಬೇಕಾಗಿದೆ ಎಂದರು.
ಕಂಬಳ ತಜ್ಞ ಶೇಖರ್ ಶೆಟ್ಟಿ ಮಾತನಾಡಿ, ಅಡ್ವೆ ನಂದಿಕೂರಿನಲ್ಲಿ ಮೊದಲ ಬಾರಿಗೆ ಮೂರು ಕರೆ, ಪೆಡ್ ಲೈಟ್ ಇತ್ಯಾದಿ ಹೊಸ ಪ್ರಯೋಗಗಳನ್ನು ಕಂಬಳದಲ್ಲಿ ಮಾಡಿ ಯಶಸ್ವಿಯಾಗಿ ಈ ಬಾರಿ ಕೋಣವನ್ನು 3 ನಿಮಿಷದಲ್ಲಿ ಗಂತು (ಕಂಬಳ ಓಟದ ಆರಂಭಿಕ ಸ್ಥಳ)ಗೆ ನಿಲ್ಲಿಸಬೇಕು. ಆ ಸಮಯಕ್ಕೆ ಬಾರದಿದ್ದಲ್ಲಿ ಅವಕಾಶವಿಲ್ಲ. ಆ ಮೂಲಕ ಸಮಯಕ್ಕೆ ಮಹತ್ವ ನೀಡಲಾಗುವುದು. ಇದು ಹೊಸ ಪ್ರಯತ್ನವಾಗಿದ್ದು ಇದಕ್ಕೆ ಕೋಣದ ಮಾಲೀಕರು ಮತ್ತು ತಂಡದ ಸಹಕಾರ ಅಗತ್ಯ ಎಂದರು.
ಈ ಸಂದರ್ಭ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಅಡ್ವೆ ಮೂಡ್ರಗುತ್ತು, ಪ್ರಧಾನ ಕಾರ್ಯದರ್ಶಿ ನವೀನ್ ಚಂದ್ರ ಸುವರ್ಣ ಅಡ್ವೆ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.