ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮಡಿವಾಳ ಮಾಚಿದೇವರಂತೆ ವೃತ್ತಿ ಗೌರವ ಬೆಳೆಸಿಕೊಳ್ಳಿ : ತಹಶೀಲ್ದಾರ್ ಡಾ.ಪ್ರತಿಭಾ ಆರ್.

Posted On: 01-02-2024 07:51PM

ಕಾಪು : ಅರಸುತನ ಮೇಲಲ್ಲ ಅಗಸುತನ ಕೀಳಲ್ಲ ಎಂದು ವೃತ್ತಿ ಗೌರವ ಸಾರಿದ ಮಡಿವಾಳ ಮಾಚಿದೇವರು 12 ಶತಮಾನದವರು, ಬಸವಣ್ಣನವರ ಸಮಕಾಲೀನರು. ವೃತ್ತಿಯಿಂದ ಮಡಿವಾಳರಾದರೂ ಹಲವು ವಚನಗಳನ್ನು ಬರೆದ ಅನುಭಾವಿ ವಚನಕಾರ. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಜಾತಿ ವ್ಯವಸ್ಥೆಯ ವಿಜೃಂಭಣೆಯನ್ನು ಪ್ರತಿಭಟಿಸಿ ನಿಂತ ಸಮಾಜ ಸುಧಾರಕರು ಎಂದು ಕಾಪು ತಾಲ್ಲೂಕು ತಹಶೀಲ್ದಾರ್ ಡಾ.ಪ್ರತಿಭಾ ಆರ್. ಹೇಳಿದರು. ಅವರು ಕಾಪು ತಹಶೀಲ್ದಾರ್ ಕಚೇರಿಯಲ್ಲಿ ಜರಗಿದ ಮಡಿವಾಳ ಮಾಚಿದೇವ ಜಯಂತಿ ಆಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದು, 12ನೇ ಶತಮಾನದ ಕಾಲದಲ್ಲಿ. ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. 354 ವಚನಗಳನ್ನು ಬರೆದಿದ್ದಾರೆ. ಮಡಿವಾಳ ಮಾಚಿದೇವರ ತತ್ವಾದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಸಾಮಾಜಿಕ ನ್ಯಾಯ, ಸಮಾನತೆ ಸಾಧಿಸಬೇಕಿದೆ. ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎನ್ನುವ ಆದರ್ಶಪ್ರಾಯವಾದ ಸಂದೇಶವನ್ನ ಪಾಲಿಸಬೇಕು. ಜೊತೆಗೆ ಅನುಷ್ಠಾನಕ್ಕೆ ಬರಬೇಕು ಮತ್ತು ಯಾವ ವೃತ್ತಿಯೂ ಕೀಳಲ್ಲ, ಯಾವ ವೃತ್ತಿಯೂ ಮೇಲಲ್ಲ. ಸಮಾಜಕ್ಕೆ ಎಲ್ಲಾ ರೀತಿಯ ವೃತ್ತಿಗಳ ಅವಶ್ಯಕತೆ ಇದೆ. ಇಲ್ಲಿ ಎಲ್ಲರೂ ಪ್ರಮುಖರು. ಈ ತತ್ವವನ್ನು ಅಳವಡಿಸಿಕೊಂಡರೆ ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರುವುದರಲ್ಲಿ ಅನುಮಾನವೇ ಬೇಡ, ಅದಕ್ಕಾಗಿ ನಾವು ಮಡಿವಾಳ ಮಾಚಿದೇವರ ವಚನಗಳನ್ನು ಅಧ್ಯಯನ ಮಾಡಿ ಅಲ್ಲಿನ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತ ವರ್ಗದವರು ಹಾಗೂ ಉಪ ತಹಶೀಲ್ದಾರ್ ಅಶೋಕ್ ಕೋಟೆಕಾರ್, ರವಿಕಿರಣ್, ದೇವಕಿ ಹಾಗೂ ಸಿಬ್ಬಂದಿ ವರ್ಗದವರು‌ ಉಪಸ್ಥಿತರಿದ್ದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.