ಶಂಕರಪುರ : ರೋಟರಿ ಶಂಕರಪುರ - ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ, ಉಚಿತ ಔಷಧ ವಿತರಣಾ ಶಿಬಿರ
Posted On:
04-02-2024 07:43PM
ಶಂಕರಪುರ : ಸುಮಾರು 38 ವರ್ಷಗಳಿಂದ ಶಂಕರಪುರದ ಪರಿಸರಕ್ಕೆ ಉತ್ತಮ ಸೇವೆ ಕೊಡುತ್ತಾ ಬಂದಿರುವ ರೋಟರಿ ಶಂಕರಪುರ 1999ರಲ್ಲಿ ರೋಟರಿ ಟ್ರಸ್ಟ್ ಸ್ಥಾಪಿಸಿಕೊಂಡು ಸದಸ್ಯರು, ದಾನಿಗಳ ನೆರವಿನಿಂದ ನಿಧಿ ಸಂಗ್ರಹಿಸಿ 2003 ರಿಂದ ಪ್ರತಿ ತಿಂಗಳ ಮೊದಲ ಆದಿತ್ಯವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಹಾಗೂ ಉಚಿತ ಔಷಧ ನೀಡುವ ಶಿಬಿರವನ್ನು ನಡೆಸುತ್ತಿದ್ದು ಮಾಚ್೯ 3 ರಂದು 240ನೇ ಶಿಬಿರ ಜರಗಲಿದೆ ಎಂದು ರೋಟರಿ ಶಂಕರಪುರ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ ವಲೇರಿಯನ್ ನೊರೊನ್ಹ ಹೇಳಿದರು.
ಅವರು ಶಂಕರಪುರ ರೋಟರಿ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು.
15ರಿಂದ 20 ರೋಗಿಗಳಿಂದ ಪ್ರಾರಂಭವಾಗಿ ಪ್ರಸ್ತುತ 100ಕ್ಕೂ ಅಧಿಕ ರೋಗಿಗಳು ಭಾಗವಹಿಸುತ್ತಿದ್ದಾರೆ. ದೂರದ ಊರುಗಳಿಂದಲೂ ರೋಗಿಗಳು ಬರುತ್ತಿದ್ದಾರೆ ಎಂದರು.
ಉಡುಪಿಯ ಎ. ವಿ. ಬಾಳಿಗ ಆಸ್ಪತ್ರೆಯ ನಿರ್ದೇಶಕ ಹಾಗೂ ಮನೋರೋಗ ತಜ್ಞ ಡಾ.ಪಿ.ವಿ. ಭಂಡಾರಿ ಮಾತನಾಡಿ ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವು ಮುಖ್ಯವಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ, ವಯೋವೃದ್ಧರಿಗೆ ಈ ಶಿಬಿರವು ಸಹಕಾರಿಯಾಗಿದೆ. ನಂಬಿಕೆಗಳ ಜೊತೆ ವೈಜ್ಞಾನಿಕ ಚಿಕಿತ್ಸೆಯು ಅವಶ್ಯಕ. ಶಾಲೆಗಳಲ್ಲಿ ಕೌನ್ಸೆಲಿಂಗ್ ತಜ್ಞರ ಆವಶ್ಯಕತೆಯಿದೆ. ರಾಜ್ಯ ಸರ್ಕಾರ ನ್ಯಾಷನಲ್ ಸೊಸೈಡ್ ಪಾಲಿಸಿಯನ್ನು ಜಾರಿಗೆ ತಂದರೂ ಇದು ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸರಿಯಾದ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಈ ಸಂದರ್ಭ ಮನೋರೋಗ ತಜ್ಞರಾದ ಡಾ. ಶ್ರೀನಿವಾಸ್ ಭಟ್, ಡಾ. ನಾಗರಾಜ ಮೂರ್ತಿ, ಕೌನ್ಸಿಲಿಂಗ್ ತಜ್ಞೆ ವಿದ್ಯಾಶ್ರೀ, ರೋಟರಿ ಶಂಕರಪುರ ಅಧ್ಯಕ್ಷರಾದ ಜಾರ್ಜ್ ಅಡ್ವರ್ಡ್ ಡಿಸಿಲ್ವ, ಕಾರ್ಯಕ್ರಮದ ನಿರ್ದೇಶಕ ಅಡ್ವರ್ಡ್ ಮೆಂಡೋನ್ಸ, ಆಂಟೊನಿಯೊ ಡೇಸಾ, ಚಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.