ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾರ್ಕಳ : ಕ್ರಿಯೇಟಿವ್‌ ಪುಸ್ತಕ ಮನೆಯ “ಮೊಬೈಲ್‌ ಬಿಡಿ ಪುಸ್ತಕ ಹಿಡಿ” ಯೋಜನೆಗೆ ಅಭೂತಪೂರ್ವ ಬೆಂಬಲ

Posted On: 10-02-2024 05:47PM

ಕಾರ್ಕಳ : ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ “ಮೊಬೈಲ್‌ ಬಿಡಿ, ಪುಸ್ತಕ ಹಿಡಿ” ಅಭಿಯಾನ ಯುವಜನರು ಮತ್ತು ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಸೆಳೆಯಬೇಕು, ಮೊಬೈಲ್‌ ನ ಬಳಕೆಯನ್ನು ಹಿತಮಿತವಾಗಿ ಮಾಡಬೇಕೆಂಬ ಉದ್ದೇಶವಿರಿಸಿಕೊಂಡು ಕಾರ್ಕಳ, ಉಡುಪಿ, ಪುತ್ತೂರು, ಸುಳ್ಯದ ಶಾಲೆಗಳಿಗೆ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಕಾರ್ಯ ನಡೆಯಿತು.

ಸಾಹಿತ್ಯಕ್ಷೇತ್ರ ಓದುಗರ ಬರ ಎದುರಿಸುತ್ತಿದೆ ಎಂಬ ಮಾತಿನ ನಡುವೆಯೂ “ದಿನಕ್ಕೊಂದು ಪುಸ್ತಕ”ವನ್ನು ಶಾಲೆಗಳಿಗೆ ತಲುಪಿಸುವ ಕಾರ್ಯ ಮಾಡಲಾಯಿತು. ಕಾರ್ಕಳ ತಾಲೂಕಿನ ಸ್ಥಳೀಯ ಶಾಲೆಗಳನ್ನು ಸಂದರ್ಶಿಸಿ ಪುಸ್ತಕವನ್ನು ಕೊಡಮಾಡಲಾಯಿತು. ಸಾರ್ವಜನಿಕರಿಂದ ಮತ್ತು ವಿದ್ಯಾಭಿಮಾನಿಗಳಿಂದ ಅಪೂರ್ವ ಬೆಂಬಲ ವ್ಯಕ್ತವಾಗಿ ಪ್ರತಿನಿತ್ಯ ಸುಮಾರು ಹತ್ತು ಪುಸ್ತಕಗಳನ್ನು ಪುಸ್ತಕ ದಾನಿಗಳ ನೆರವಿನೊಂದಿಗೆ ವಿತರಿಸಲಾಯಿತು.

ಈ ಯೋಜನೆಗೆ ಸಾರ್ವಜನಿಕರು, ಪುಸ್ತಕ ಪ್ರಿಯರಿಂದ ರೂ. 28,110 ಸಂಗ್ರಹಗೊಂಡು, ದಿನಕ್ಕೆ 10 ಪುಸ್ತಕದಂತೆ ಒಟ್ಟು 312 ಪುಸ್ತಕಗಳನ್ನು ಜನವರಿ ತಿಂಗಳಿನಲ್ಲಿ ಕಾರ್ಕಳವಲ್ಲದೆ ದೂರದ ಸುಳ್ಯ, ಪುತ್ತೂರಿನ ಶಾಲೆಗಳನ್ನೂ ಆಯ್ಕೆಮಾಡಿ ಪುಸ್ತಕ ವಿತರಿಸಲಾಗಿದೆ ಹಾಗೂ ಪುಸ್ತಕ ಸ್ವೀಕರಿಸಿದ ವಿದ್ಯಾರ್ಥಿಗಳೇ ಸ್ವತಃ ಪತ್ರ ಮುಖೇನ ತಮ್ಮ ಅಭಿಪ್ರಾಯ ತಿಳಿಸುವುದು ಹೆಮ್ಮೆಯ ಸಂಗತಿಯಾಗಿದೆ ಮತ್ತು ಪುಸ್ತಕ ಪ್ರೀತಿಯ ದ್ಯೋತಕವಾಗಿದೆ. ಇದೀಗ ಫೆಬ್ರವರಿ ತಿಂಗಳಿನ ಪುಸ್ತಕ ತಲುಪಿಸುವ ಕಾರ್ಯ ನಡೆಯುತ್ತಿದೆ. ಸಾಹಿತ್ಯಾಸಕ್ತರು, ಶಿಕ್ಷಣ ಪ್ರೇಮಿಗಳು, ಉಪನ್ಯಾಸಕರು, ಶಿಕ್ಷಕ ಬಂಧುಗಳು, ಸಾರ್ವಜನಿಕರು ಈ ಯೋಜನೆಗೆ ಕೈಜೋಡಿಸುವಂತೆ ವಿನಂತಿಸಿದ್ದಾರೆ.