ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ಕೋರ್ಸ್ ಉದ್ಘಾಟನೆ

Posted On: 13-02-2024 03:32PM

ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು 2023-24ನೇ ಸಾಲಿನಿಂದ ಎಂಬಿಎ ಸ್ನಾತಕೋತ್ತರ ಪದವಿ ತರಗತಿಗಳು ಪ್ರಾರಂಭವಾಗಿದ್ದು ಅದರ ಉದ್ಘಾಟನೆಯನ್ನು ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಕಾಲೇಜಿನ ಆವರಣದಲ್ಲಿ ಮಾಡಿದರು. ಈ ಸಂದರ್ಭ ಮಾತನಾಡಿದ ಶ್ರೀಗಳು ವಿದ್ಯಾಸಂಸ್ಥೆಯಲ್ಲಿ ಎಂಬಿಎ ತರಗತಿಗಳನ್ನು ಪ್ರಾರಂಭಿಸಿದ್ದಕ್ಕೆ ಅತೀವ ಹರ್ಷ ವ್ಯಕ್ತಪಡಿಸಿ, ಸೋದೆ ಮಠದ ಶ್ರೀ ವಾದಿರಾಜ ಸ್ವಾಮೀಜಿಯವರು ಉಡುಪಿಯಲ್ಲಿ ಅಷ್ಟಮಠ ವ್ಯವಸ್ಥೆಯನ್ನು 16ನೇ ಶತಮಾನದಲ್ಲಿಯೇ ರೂಪಿಸಿ, ಈಗಿನ ನಿರ್ವಹಣಾಶಾಸ್ತ್ರದ ಪರಿಣಿತರಿಗೆ ಮಾದರಿಯಾಗಿದ್ದಾರೆ. ತತ್ವಶಾಸ್ತ್ರವನ್ನು ಶಿಕ್ಷಣದಲ್ಲಿ ಅಳವಡಿಸಿದಾಗ ಮಾತ್ರ ಉತ್ತಮ ಆವಿಷ್ಕಾರಗಳು ಹೊರಬರಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಇಂದಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀಗಳು ಎಂಬಿಎ ಕೋರ್ಸ್‌ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರಾದ ಡಾ. ಗುರುರಾಜ್ ಹೆಚ್ ಕಿದಿಯೂರು ಭಾಗವಹಿಸಿದ್ದರು. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತವನ್ನು ವಿಶ್ವದ ಅತೀ ದೊಡ್ಡ ಆರ್ಥಿಕತೆಯನ್ನಾಗಿ ಪರಿವರ್ತಿಸುವಲ್ಲಿ ಎಂಬಿಎ ಪದವೀಧರರ ಪಾತ್ರವನ್ನು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ಸಂವಹನ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ದಿನ ಪತ್ರಿಕೆಗಳಲ್ಲಿನ ವ್ಯಾಪಾರ, ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದ ಅಂಕಣಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಇದಲ್ಲದೆ, ಕೈಗಾರಿಕೆಗಳಲ್ಲಿ ನಿರ್ವಹಣಾ ಶಾಸ್ತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ವಿದ್ಯಾರ್ಥಿಗಳು ತಲ್ಲೀನರಾಗಬೇಕೆಂದು ಸಲಹೆ ನೀಡಿದರು.

ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷರಾದ ಪಿ ಶ್ರೀನಿವಾಸ ತಂತ್ರಿ, ಕಾರ್ಯದರ್ಶಿಗಳಾದ ರತ್ನಕುಮಾರ್, ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಎಂಬಿಎ ವಿಭಾಗದ ನಿರ್ದೇಶಕರಾದ ಡಾ. ಸೂರಜ್ ಫ್ರಾನ್ಸಿಸ್ ನೊರೋನ್ಹ, ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಡೀನ್, ವಿಭಾಗದ ಮುಖ್ಯಸ್ಥರು, ತರಬೇತಿ ಮತ್ತು ಉದ್ಯೋಗ ನಿಯೋಜನ ಅಧಿಕಾರಿ, ಸಂಸ್ಥೆಯ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಕು. ಸುಪ್ರೀತ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಎಂಬಿಎ ವಿಭಾಗದ ಆಡಳಿತ ಅಧಿಕಾರಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು, ಎಂಬಿಎ ವಿಭಾಗದ ನಿರ್ದೇಶಕರಾದ ಡಾ. ಸೂರಜ್ ಫ್ರಾನ್ಸಿಸ್ ನೊರೋನ್ಹ ವಂದಿಸಿದರು ಮತ್ತು ಪ್ರಾಧ್ಯಾಪಕಿಯಾದ ಅಕ್ಷತಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.