ಫೆ. 18 : ಪಡುಬಿದ್ರಿ ಸಿ.ಎ.ಸೊಸೈಟಿ - ನವೀಕೃತ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಉದ್ಘಾಟನೆ
Posted On:
14-02-2024 11:23AM
ಪಡುಬಿದ್ರಿ: ಉಡುಪಿ ಜಿಲ್ಲೆಯಲ್ಲಿ ಅತ್ಯುತ್ತಮ ಬ್ಯಾಂಕಿಂಗ್ ಸೊಸೈಟಿಯಾಗಿ ಹೆಗ್ಗಳಿಕೆ ಹೊಂದಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನವೀಕರಣಗೊಂಡ ಹವಾನಿಯಂತ್ರಿತ ಹೆಜಮಾಡಿ ಶಾಖೆಯು ಫೆಬ್ರವರಿ 18, ಭಾನುವಾರ ಉದ್ಘಾಟನೆಗೊಳ್ಳಲಿದೆ ಎಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಬುಧವಾರ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಕೇಂದ್ರ ಕಚೇರಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಳಿಗ್ಗೆ 10 ಗಂಟೆಗೆ ಬ್ಯಾಂಕಿಂಗ್ ಕಟ್ಟಡವನ್ನು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು. ಟಿ. ಖಾದರ್ ಉದ್ಘಾಟಿಸಲಿದ್ದು, ಪಡುಬಿದ್ರಿ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಬಲೀಕರಣ ಇಲಾಖಾ ಸಚಿವರಾದ ಲಕ್ಷ್ಮೀ ಹೆಬ್ಬಾಳ್ವರ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸುವರು.
ಸ್ಥಳೀಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ ಸುವರ್ಣ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ, ಬೆಂಗಳೂರು ಇದರ ನಿರ್ದೇಶಕ ಬಿ ಜಯಕರ ಶೆಟ್ಟಿ ಇಂದ್ರಾಳಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ., ಬೆಂಗಳೂರು, ನಿರ್ದೇಶಕ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ ಸಹಿತ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದರು.
ಸಮಾರಂಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕಾಪು ದಿವಾಕರ ಶೆಟ್ಟಿ, ಶೈಕ್ಷಣಿಕ ಸಾಧಕಿ ಡಾ. ಹರ್ಷಿತ ಎನ್. ಅಂಚನ್, ಕ್ರೀಡಾ ಸಾಧಕ ಧನುಷ್ ಎಸ್. ಸಾಲ್ಯಾನ್‌ರನ್ನು ಸನ್ಮಾನಿಸಲಾಗುವುದು.
ಸೊಸೈಟಿ ವ್ಯಾಪ್ತಿಯ ಕರಾವಳಿಯನ್ನು ನಿರಂತರವಾಗಿ ಸ್ವಚ್ಛಗೊಳಿಸಿ ಉತ್ತಮ ಸಮಾಜ ಸೇವೆಗೈಯ್ಯುತ್ತಿರುವ ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದ ಮತ್ತು ಪಡುಬಿದ್ರಿ ನಡಿಪಟ್ನ ಕರಾವಳಿ ಸ್ಟಾರ್ ಸಂಸ್ಥೆಗಳಿಗೆ ಸ್ವಚ್ಚತಾ ಪರಿಕರಗಳನ್ನು ವಿತರಿಸಲಾಗುವುದು.
ಫೆ. 5 ರಿಂದ ಮಾರ್ಚ್ ಅಂತ್ಯದವರೆಗೆ ಸೊಸೈಟಿಯಲ್ಲಿ ಠೇವಣಿ ವಿನಿಯೋಗಿಸುವ ಠೇವಣಿದಾರರಿಗೆ ಹಾಗೂ ಚಿನ್ನಾಭರಣ ಸಾಲ ಪಡೆಯುವ ಸಾಲಗಾರರಿಗೆ ಲಕ್ಕಿ ಕೂಪನ್ ವಿತರಿಸಲಾಗುತ್ತಿದ್ದು, ಉದ್ಘಾಟನಾ ಸಮಾರಂಭದಂದು ಲಕ್ಕಿ ಕೂಪನ್‌ಗಳ ಡ್ರಾ ಮೂಲಕ 10 ವಿಜೇತರನ್ನು ಗಣ್ಯರು ಆಯ್ಕೆ ಮಾಡಲಿದ್ದಾರೆ. ಮಾರ್ಚ್ 31 ರವರೆಗೆ ಈ ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 3 ರಂದು ವಿಜೇತರನ್ನು ಆಯ್ಕೆಮಾಡಿ ಬಹುಮಾನ ನೀಡಲಾಗುವುದು. ಅತ್ಯಾಧುನಿಕ ಭದ್ರತಾ ಕೊಠಡಿ, ನವೀಕೃತ ಹೆಜಮಾಡಿ ಶಾಖೆಯಲ್ಲಿ ಅತ್ಯಾಧುನಿಕ ಹಾಗೂ ಬೃಹತ್ ಗಾತ್ರದ ಭದ್ರತಾ ಕೊಠಡಿ ಅಳವಡಿಸಲಾಗಿದ್ದು, ಭದ್ರತಾ ಕೊಠಡಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ನಿಶ್ಮಿತ ಪಿ.ಎಚ್, ನಿರ್ದೇಶಕರುಗಳು ಉಪಸ್ಥಿತರಿದ್ದರು.