ಕಾಪು : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾಪು ತಾಲೂಕು ಕೈಪುಂಜಾಲು, ಉಳಿಯಾರಗೋಳಿ, ಮಟ್ಟು ಆಳಿಂಜೆ, ತೆಂಕು ಕೊಪ್ಪಳ, ಬಡಗು ಕೊಪ್ಪಳ, ಕಲ್ತಟ್ಟ ಹಾಗೂ ದಡ್ಡಿ ಎಂಬಲ್ಲಿ ಪಾಂಗಾಳ ನದಿದಂಡೆಯ ಕೊರೆತಕ್ಕೊಳಗಾದ ಆಯ್ದ ಭಾಗಗಳಲ್ಲಿ ಖಾರ್ಲಾಂಡ್ ನಿರ್ಮಾಣ ಕಾಮಗಾರಿಯು ತೀರಾ ಅತ್ಯವಶ್ಯಕವಿರುತ್ತದೆ. ಈ ಭಾಗದಲ್ಲಿ ಜಿ.ಐ ಟ್ಯಾಗ್ ಮಾನ್ಯತೆ ಹೊಂದಿದ ಮಟ್ಟುಗುಳ್ಳ ವಿಭಿನ್ನ ತರಕಾರಿ ಬೆಳೆಯಾಗಿದ್ದು, ಬಹು ಬೇಡಿಕೆಯದ್ದಾಗಿರುತ್ತದೆ. ಅಷ್ಟ ಮಠದ ಪ್ರಮುಖ ಯತಿಗಳಾದ ವಾದಿರಾಜ ಸ್ವಾಮೀಗಳು ಪ್ರಸಾದ ರೂಪದಲ್ಲಿ ನೀಡಿದ ದಿವ್ಯ ಸ್ವರೂಪದ ಬೀಜವನ್ನು ಬಿತ್ತಿದ ಪ್ರದೇಶವಾಗಿರುತ್ತದೆ ಎಂಬ ಐತಿಹ್ಯವಿದೆ. ಮಟ್ಟುಗುಳ್ಳ ಬೆಳೆಗಾರರು ಇಂದಿಗೂ ಉಡುಪಿಯ ಪರ್ಯಾಯ ಮಹೋತ್ಸವಕ್ಕೆ ಮಟ್ಟುಗುಳ್ಳ ತರಕಾರಿಯನ್ನು ಹೊರೆಕಾಣಿಕೆಯ ರೂಪದಲ್ಲಿ ನೀಡುತ್ತಾ ಬಂದಿರುತ್ತಾರೆ. ಅಲ್ಲದೇ ಸದ್ರಿ ಪ್ರದೇಶದಲ್ಲಿನ ತೆಂಗು ಬೆಳೆಯು ಹಾನಿಯಾಗಿರುತ್ತದೆ.
ಆದ್ದರಿಂದ ಕೆಳಗಿನ ಪ್ರದೇಶಗಳಲ್ಲಿ ಪಾಂಗಾಳ ನದಿಗೆ ಖಾರ್ಲಾಂಡ್ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅನುದಾನ ಮಂಜೂರು ಮಾಡುವಂತೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸದನದ ಗಮನ ಸೆಳೆದರು.