ಪಡುಬಿದ್ರಿ : ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದರ ವಾಸ ಯೋಗ್ಯವಲ್ಲದ ಮನೆಯನ್ನು ಪಡುಬಿದ್ರಿ ಲಯನ್ಸ್ ಕ್ಲಬ್ ವತಿಯಿಂದ ನವೀಕರಿಸಿ ಗುರುವಾರ ದಾಯ್ಜಿ ವರ್ಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ ಹಸ್ತಾಂತರಿಸಿದರು.
ಪಡುಬಿದ್ರಿ-ಪಾದೆಬೆಟ್ಟು ಕೆರಮದ ರಮೇಶ್ ಆಚಾರ್ಯ-ಸುಮತಿ ದಂಪತಿ ವಾಸಿಸುವ ಮನೆಯು ಅತ್ಯಂತ ಅಜೀರ್ಣಾವಸ್ಥೆಯಲ್ಲಿರುವುದನ್ನು ಮನಗಂಡು ಸ್ಥಳೀಯರಾದ ಅಶ್ವಥ್ ಆಚಾರ್ಯ ಕೋರಿಕೆಯ ಮೇರೆಗೆ ಪಡುಬಿದ್ರಿ ಲಯನ್ಸ್ ಸಂಸ್ಥೆಯು ಸುಮಾರು ರೂ. 2 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ವಾಸಯೋಗ್ಯವಾಗಿ ನವೀಕರಿಸಿ ವಿದ್ಯುತ್ ಸಂಪರ್ಕ ಸಹಿತ ಶೌಚಾಲಯ ನಿರ್ಮಿಸಿ ಮನೆಯನ್ನು ನಿರ್ಮಿಸಿ ಕೊಟ್ಟಿದೆ.
ಮನೆ ಹಸ್ತಾಂತರಿಸಿ ಮಾತನಾಡಿದ ವಾಲ್ಟರ್ ನಂದಳಿಕೆ ಸಮಾಜ ಸೇವೆಯಲ್ಲಿ ಶ್ರೇಷ್ಠ ಶ್ರೇಣಿಯಲ್ಲಿ ಕಂಡುಬರುವ ಕಾಯಕವನ್ನು ಪಡುಬಿದ್ರಿ ಲಯನ್ಸ್ ನಿರ್ವಹಿಸಿದೆ. ಇಂತಹ ಸೇವೆಯಿಂದ ಸಮಾಜ ಮತ್ತು ದೇಶಸೇವೆ ಸಾಧ್ಯವಿದೆ ಎಂದರು.
ಈ ಸಂದರ್ಭ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎನ್. ಎಮ್.ಹೆಗ್ಡೆ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಜಿತೇಂದ್ರ ಫುರ್ಟಾಡೊ, ಉದ್ಯಮಿ ಫ್ರಾನ್ಸಿಸ್ ಡಿಸೋಜಾ, ಪ್ರಾಂತೀಯ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಪಡುಬಿದ್ರಿ ಲಯನ್ಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಡ್ವೆ, ಪಡುಬಿದ್ರಿ ಸ್ಪೂರ್ತಿ ಲಯನ್ಸ್ ಅಧ್ಯಕ್ಷೆ ಶಾರ್ಲೆಟ್ ಫುರ್ಟಾಡೊ, ಲಯನ್ಸ್ ಪ್ರಮುಖರಾದ ಕಪಿಲ್, ಪ್ರಗತ್ ಜಿ. ಶೆಟ್ಟಿ, ಕಸ್ತೂರಿ ಪ್ರವೀಣ್, ಐರಿನ್ ಅಂದ್ರಾದೆ, ಮ್ಯಾಕ್ಸಿಂ ಡಿಸೋಜಾ, ಸ್ನೇಹಾ ಪ್ರವೀಣ್, ಸವಿತಾ ಫುರ್ಟಾಡೋ, ಗೀತಾ ನವೀನ್‌ಚಂದ್ರ, ಕುಟ್ಟಿ ಪೂಜಾರಿ, ವಿಶ್ವಕರ್ಮ ಸಮಾಜದ ಮುಖ್ಯಸ್ಥ ವಸಂತ ಅಚಾರ್ಯ ಉಪಸ್ಥಿತರಿದ್ದರು.