ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬೆಳ್ಳೆ: ಶಿಕ್ಷಣತಜ್ಞ ಆರ್.ಎಸ್. ಬೆಳ್ಳೆ ಸಂಸ್ಮರಣೆ

Posted On: 26-02-2024 05:37PM

ಪಡುಬೆಳ್ಳೆ : ಸಮಾಜಮುಖಿ ವ್ಯಕ್ತಿತ್ವವನ್ನು ರೂಢಿಸಿಕೊಂಡಾಗ ಮಾತ್ರ ಅಭಿವೃದ್ಧಿ ಹಾಗೂ ಯಶಸ್ಸು ಸಂಪೂರ್ಣ ಸಾಧ್ಯವಾಗುತ್ತದೆ ಎಂಬುದಕ್ಕೆ ಶಿಕ್ಷಣ ತಜ್ಞ ಮತ್ತು ಸಮಾಜಸೇವಕ ಆರ್.ಎಸ್. ಬೆಳ್ಳೆ ಅವರ ಬದುಕೇ ಉದಾಹರಣೆಯಾಗಿದೆ ಎಂದು ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ದೇವದಾಸ್ ಹೆಬ್ಬಾರ್ ಹೇಳಿದರು. ಅವರು ಪಡುಬೆಳ್ಳೆ ಪಾಂಬೂರಿನಲ್ಲಿ ಫೆ. 25ರಂದು ಜರಗಿದ ಆರ್.ಎಸ್. ಬೆಳ್ಳೆ ಸಂಸ್ಮರಣೆಯ ಹೊನಲು ಬೆಳಕಿನ ಮಿತ್ರಗೋಷ್ಠಿಯಲ್ಲಿ ಮಾತನಾಡಿದರು.

ಆರ್.ಎಸ್. ಬೆಳ್ಳೆ ಅವರು ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಯಾಗಿದ್ದರು. ನಿವೃತ್ತಿ ಬಳಿಕ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರದ್ದು ತ್ಯಾಗಪೂರ್ಣ ಬದುಕಾಗಿದ್ದು, ತನ್ನ ಶಕ್ತಿಗೂ ಮೀರಿ ಜನರಿಗೆ ನೆರವು ನೀಡುತ್ತಿದ್ದರು ಎಂದು ಅವರು ನೆನಪಿಸಿಕೊಂಡರು. ಕವಿ, ಸಾಹಿತಿ‌ ರಿಚ್ಚಾರ್ಡ್ ದಾಂತಿ ಪಾಂಬೂರು ಅವರು ಸಂಸ್ಮರಣಾ ಭಾಷಣ ಮಾಡಿದರು. ಉಡುಪಿಯ ಹಿರಿಯ ನ್ಯಾಯವಾದಿ ಜಯಶಂಕರ ಕುತ್ಪಾಡಿ ಅವರಿಗೆ ಆರ್.ಎಸ್. ಬೆಳ್ಳೆ ಸ್ಮರಣಾರ್ಥ ಮೊದಲ ವರ್ಷದ ಪುರಸ್ಕಾರವನ್ನು ಪ್ರದಾನಿಸಲಾಯಿತು.

ನಿವೃತ್ತ ಮುಖ್ಯೋಪಾಧ್ಯಾಯ ವಾಸು ಆಚಾರ್, ಪಡುಬೆಳ್ಳೆ ನಾರಾಯಣಗುರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ದೇವಾಡಿಗ, ಕಸಾಪ ಕಾಪು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ, ಬೆಳ್ಳೆ ಪರಿಚಯ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ಪಾಂಬೂರು, ಸ್ಯಾಮ್‌ಸನ್ ನೊರೋನ್ನಾ ದಿಂದೊಟ್ಟು, ಮುರಳೀಧರ ಆರ್. ಸಾಮಗ ಬೆಳ್ಳೆ ಮಾತನಾಡಿದರು. ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದು, ಅವರ ಅವಧಿಗೆ ಗ್ರಾಮ ಪಂಚಾಯಿತಿಯು ಗಾಂಧಿ ಗ್ರಾಮ ಪುರಸ್ಕಾರ ಪಡೆದುದಕ್ಕಾಗಿ ಅವರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸಲಾಯಿತು.

ಕಾಪು‌ ತಾಪಂ ಮಾಜಿ ಸದಸ್ಯೆ ಸುಜಾತಾ ಎಸ್. ಸುವರ್ಣ, ನಿವೃತ್ತ ಕಚೇರಿ ಸಿಬಂದಿ ಕ್ರಿಸ್ತಿನ್ ಫೆರ್ನಾಂಡಿಸ್, ನಿವೃತ್ತ ಹಿರಿಯ ಶುಶ್ರೂಶಕಿ ಉಷಾ ಮರಾಠೆ, ಪತ್ರಕರ್ತ ಶ್ರೀರಾಮ ದಿವಾಣ, ಪೆಲ್ವಿನ್ ಫ್ರಾನ್ಸಿಸ್ ಕ್ವಾಡ್ರಸ್, ಅರುಣ್ ನೊರೋನ್ನಾ, ಪೀಟರ್ ಮಿನೇಜಸ್ ಉಪಸ್ಥಿತರಿದ್ದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ನಿರೂಪಿಸಿದರು.