ಮಸ್ಕತ್ : ‘ಬಿರುವ ಜವನೆರ್ ‘ ಸಂಘಟನೆ - ‘ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ’ ಯಕ್ಷಗಾನ ತಾಳಮದ್ದಳೆ
Posted On:
26-02-2024 05:57PM
ಮಸ್ಕತ್ : ‘ಬಿರುವ ಜವನೆರ್ ‘ ಸಂಘಟನೆ ಯು ಮಸ್ಕತ್ ನ ದಾರಸೈಟ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪೂಜಾ ಸಹಿತ ‘ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ’ ಕಥೆಯನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರಸ್ತುತಿಗೊಳಿಸಲಿದೆ.
ಹೊರರಾಷ್ಟ್ರದಲ್ಲಿ ಮೊದಲ ಬಾರಿ ಶನೀಶ್ವರ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ ಪಡೆದ ತಂಡದಿಂದ ಸತ್ಯನಾರಾಯಣ ಪೂಜಾ ಸಹಿತ ತಾಳಮದ್ದಳೆ ಸಂಪನ್ನಗೊಳ್ಳಲಿದೆ. ಮಾ.1ರಂದು ಶುಕ್ರವಾರ ಪೂರ್ವಾಹ್ನ 8.30 ರಿಂದ ಅಪರಾಹ್ನ 1.30 ರ ತನಕ ಶನೀಶ್ವರ ಪೂಜೆ ಖ್ಯಾತಿಯ ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ, ಮಂಗಳೂರು ತಂಡವು ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಇವರ ಸಂಯೋಜನೆ ಯಲ್ಲಿ ಪ್ರದರ್ಶನ ನೀಡಲಿದೆ.
ಕಳೆದ ಮೂರು ದಶಕಗಳಿಂದ ತಾಳಮದ್ದಳೆ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿರುವ ತುಳುನಾಡಿನ ಈ ಖ್ಯಾತ ತಂಡವು ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾಗೂ ದುಬೈ, ಅಬುದಾಬಿ, ಮಸ್ಕತ್ ರಾಷ್ಟ್ರಗಳಲ್ಲಿ ಪೂಜಾ ಸಹಿತ ಶನೀಶ್ವರ ತಾಳಮದ್ದಳೆ ನಡೆಸಿ ಜನಪ್ರಿಯತೆ ಗಳಿಸಿವೆ. ಈ ಪೂರ್ವದಲ್ಲಿ ‘ಬಿರುವ ಜವನೆರ್’ ಇದೇ ತಂಡದಿಂದ ಎರಡು ಬಾರಿ ಶನಿಪೂಜೆಯನ್ನು ಮಸ್ಕತ್ ನಲ್ಲಿ ಆಯೋಜಿಸಿ ಯಶಸ್ವಿಯಾಗಿದ್ದಾರೆ. ಈ ಸಂಘಟನೆಯು ಧಾರ್ಮಿಕ ಮತ್ತು ಸಮಾಜ ಸೇವಾ ಚಟುವಟಿಕೆಯನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ.
ಹಿಮ್ಮೇಳದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ದಯಾನಂದ ಕೋಡಿಕಲ್ ಹಾಗೂ ಅರ್ಥಧಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ಸದಾಶಿವ ಆಳ್ವ ತಲಪಾಡಿ, ಶಶಿಕಾಂತ್ ಶೆಟ್ಟಿ ಕಾರ್ಲ, ಪ್ರಸನ್ನ ಶೆಟ್ಟಿ ಅತ್ತೂರ್ ಗುತ್ತು, ಮನೋಹರ ಕುಂದರ್ ಎರ್ಮಾಳ್, ಪ್ರಜ್ವಲ್ ಶೆಟ್ಟಿ ಗುರುವಾಯನಕೆರೆ, ನಿತಿನ್ ಹುಣಸೆಕಟ್ಟೆ ಭಾಗವಹಿಸಲಿದ್ದಾರೆ. ರವಿ ಭಟ್ ಪಡುಬಿದ್ರಿ ಅವರು ಪೂಜಾ ವ್ಯವಸ್ಥೆಯಲ್ಲಿ ಸಹಕರಿಸಲಿದ್ದಾರೆ. ಪೂಜೆಯ ನಂತರ ಪ್ರಸಾದ ಭೋಜನ ಹಾಗೂ ಸಂಜೆ 5.30 ರ ತನಕ ಕಲ್ಲಡ್ಕ ವಿಠ್ಠಲ ನಾಯ್ಕ್ ಅವರ ತಂಡ ದಿಂದ ‘ಗೀತಾ ಸಾಹಿತ್ಯ ಸಂಭ್ರಮ’ ಜರಗಲಿದೆ. ಮಸ್ಕತ್ ನಲ್ಲಿ ನೆಲೆಸಿರುವ ಎಲ್ಲಾ ಸಮುದಾಯದ ಭಕ್ತ ಭಾಂದವರು ಆಗಮಿಸಿ ಸಹಕರಿಸಬೇಕೆಂದು ಬಿರುವ ಜವನೆರ್ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.