ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಚ್ಚಿಲ : ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಉದ್ಘಾಟನೆ

Posted On: 03-03-2024 02:06PM

ಉಚ್ಚಿಲ : ನಮ್ಮ ದೇಶ, ರಾಜ್ಯಕ್ಕೆ ಹೋಲಿಸಿದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸಹಕಾರಿ ಚಳುವಳಿ ಯಶಸ್ವಿಯಾಗಿ ಮನ್ನಡೆಯುತ್ತಿದೆ. ಖಾಸಗಿ, ವಾಣಿಜ್ಯ ಬ್ಯಾಂಕುಗಳಲ್ಲಿ ವ್ಯವಹಾರ ತಪ್ಪಲ್ಲ. ನಮ್ಮ ಸಮಾಜ, ಗ್ರಾಹಕರ ಆರೋಗ್ಯದ ಬಗ್ಗೆ ಇವರು ಚಿಂತಿಸಿಲ್ಲ. ಇದು ಸಹಕಾರಿ ಕ್ಷೇತ್ರದ ಮೂಲಕ ಮಾತ್ರ ಸಾಧ್ಯವಾಗಿದೆ. ಸಹಕಾರಿ ಕ್ಷೇತ್ರ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಕಾರ್ಯಗಳ ಜೊತೆಗೆ ಉಳಿತಾಯದ ಬಗ್ಗೆಯೂ ಜಾಗೃತಿ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಬೆಳಪು ವ್ಯವಸಾಯ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಅವರು ಬೆಳಪು ವ್ಯವಸಾಯ ಸಹಕಾರಿ ಸಂಘ (ನಿ.) ಪಣಿಯೂರು, ನವೋದಯ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು, ರೋಟರಿ ಕ್ಲಬ್ ಉಚ್ಚಿಲ, ನೇತ್ರಜ್ಯೋತಿ ಚಾರಿಟೇಬಲ್‌ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇವರ ಸಹಯೋಗದೊಂದಿಗೆ ರವಿವಾರ ಬೆಳಪು ವ್ಯವಸಾಯ ಸಹಕಾರಿ ಸಂಘದ ಉಚ್ಚಿಲ ಶಾಖೆಯ ಸಹಕಾರಿ ಮಹಲ್ ನಲ್ಲಿ ಜರಗಿದ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಚ್ಚಿಲದ ಸೈಯ್ಯದ್ ಅರಬಿ ಜುಮ್ಮಾ ಮಸೀದಿ ಖತೀಬರಾದ ಜನಾಬ್| ಇಸ್ಹಾಕ್ ಫೈಝಿ ಹಾಗೂ ಉಚ್ಚಿಲ ಚರ್ಚ್ ಧರ್ಮಗುರುಗಳಾದ ರೆ|ಫಾ। ಜೋಸ್ವಿ ಫೆರ್ನಾಂಡೀಸ್ ಆಶೀರ್ವಚನ ನೀಡಿದರು. ಈ ಸಂದರ್ಭ ಪಡುಬಿದ್ರಿ ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಉಚ್ಚಿಲ ರೋಟರಿ ಕ್ಲಬ್‌ ಅಧ್ಯಕ್ಷರಾದ ಯು.ಸಿ. ಶೇಖಬ್ಬ ಸಂದರ್ಭೋಚಿತವಾಗಿ ಮಾತನಾಡಿದರು. ಶಿಬಿರದ ಮುಖ್ಯ ವೈದ್ಯೆ ಡಾ. ಶ್ರೀಕೀರ್ತಿ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.

ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಿದ್ದರು. ಬೆಳಪು ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನ, ಪ್ರಸಾದ್ ನೇತ್ರಾಲಯದ ಸಂಪರ್ಕಾಧಿಕಾರಿ ಹರ್ಷ, ಬೆಳಪು ಸಿ.ಎ. ಬ್ಯಾಂಕ್ ನಿರ್ದೇಶಕರುಗಳು, ನವೋದಯ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ರೋಟರಿ ಕ್ಲಬ್ ಉಚ್ಚಿಲ, ನೇತ್ರಜ್ಯೋತಿ ಚಾರಿಟೇಬಲ್‌ ಟ್ರಸ್ಟ್ ಉಡುಪಿ ಪದಾಧಿಕಾರಿಗಳು, ಸಿಬ್ಬಂದಿ, ಪ್ರಸಾದ್ ನೇತ್ರಾಲಯದ ವೈದ್ಯರು ಉಪಸ್ಥಿತರಿದ್ದರು.

ಸುಮಾರು ನೂರಕ್ಕೂ ಮಿಕ್ಕಿ ಸಾರ್ವಜನಿಕರು ಶಿಬಿರದ ಪ್ರಯೋಜನ ‌ಪಡೆದರು. ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ಪ್ರಸ್ತಾವನೆಗೈದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.