ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ : ಉಡುಪಿ ತಂಡ ವಿನ್ನರ್ಸ್, ಕುಂದಾಪುರ ತಂಡ ರನ್ನರ್ಸ್

Posted On: 06-03-2024 04:48PM

ಹೆಜಮಾಡಿ : ಲೀಗ್ ಮಾದರಿಯಲ್ಲಿ ಹೆಜಮಾಡಿಯ ರಾಜೀವ್ ಗಾಂಧಿ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಕಾಪು ತಾ. ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾ ಪತ್ರಕರ್ತರ ರಜತ ಸಂಭ್ರಮದ ಕ್ರಿಕೆಟ್ ಪಂದ್ಯಾಕೂಟದಲ್ಲಿ ಭಾಗವಹಿಸಿದ್ದ ಆರು ತಂಡಗಳ ಕ್ರಿಕೆಟ್ ಹಣಾಹಣಿಯಲ್ಲಿ ರೋಚಕವಾಗಿದ್ದ ಅಂತಿಮ ಪಂದ್ಯದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ತಂಡವು, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವನ್ನು 4ರನ್ನುಗಳಿಂದ ಸೋಲಿಸಿ ಜಿಲ್ಲಾ ಮಟ್ಟದ ಕ್ರಿಕೆಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ವಿಜಯೀ ಜಿಲ್ಲಾ ತಂಡವು ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಉಡುಪಿ ತಂಡವು ನಿಗದಿತ 5 ಓವರ್‌ಗಳಲ್ಲಿ 37ರನ್ನುಗಳನ್ನು ಪೇರಿಸಿತ್ತು. ಕುಂದಾಪುರ ತಾ| ಪತ್ರಕರ್ತರ ತಂಡವು ದ್ವಿತೀಯ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ವಿನೋದ್ ಸಾಲ್ಯಾನ್ ಬೆಳ್ಳಾಯರು ಮುಖ್ಯ ಅತಿಥಿಗಳಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಜಿಲ್ಲಾ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ರಜತ ಸಂಭ್ರಮದ ಸಂಚಾಲಕ ಮಹಮ್ಮದ್ ಶರೀಫ್, ಕಾಪು ತಾ| ಅಧ್ಯಕ್ಷ ಹರೀಶ್ ಹೆಜಮಾಡಿ, ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ, ಕ್ರೀಡಾ ಸಂಚಾಲಕ ರಾಕೇಶ್ ಕುಂಜೂರು ವೇದಿಕೆಯಲ್ಲಿದ್ದರು. ಯತೀಶ್ ಉಡುಪಿ, ಸಂತೋಷ್ ಕುದೇಶ್ವರ, ಹರೀಶ್ ಕುಂದಾಪುರ, ರಾಘವೇಂದ್ರ ಉಡುಪಿ ವೈಯಕ್ತಿಕ ಪ್ರಶಸ್ತಿಗೆ ಭಾಜನರಾದರು.

ಮುಖ್ಯ ಅತಿಥಿಗಳಾಗಿದ್ದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ಮಾತನಾಡಿ, ಒತ್ತಡದ ನಡುವೆಯೂ ಪತ್ರಕರ್ತರು ಕ್ರೀಡೋತ್ಸಾಹದಿಂದ ಸೇರಿದ್ದೀರಿ. ನಿಮ್ಮ ಸಂಘಟನೆಯಿಂದ ಮತ್ತಷ್ಟು ಬಲಯುತರಾಗಿರಿ ಎಂದರು. ಕ್ರೀಡಾಸೂರ್ತಿ, ಕ್ರೀಡಾ ಮನೋಭಾವ ಪತ್ರಕರ್ತರಲ್ಲಿ ನಿರಂತರವಾಗಿರಲಿ. ಇದು ಸೌಹಾರ್ದತೆಗೂ ನಾಂದಿಯಾಗುತ್ತದೆ. ಯಾವುದೇ ಹಮ್ಮು ಇರದೆ ಭಾಗವಹಿಸುತ್ತಿರುವುದನ್ನು ಕಂಡು ತನಗೂ ಕ್ರಿಕೆಟ್ ಆಡಬೇಕೆನಿಸಿದೆ. ಪತ್ರಕರ್ತರ ಮತ್ತಷ್ಟು ಕ್ರೀಡೋತ್ಸವಗಳು ನಡೆಯುತ್ತಿರಲಿ ಎಂದು ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಅರ್. ಹೇಳಿದರು. ಅವರು ಫೈನಲ್ ಪಂದ್ಯದ ಕ್ರೀಡಾಳುಗಳಿಗೆ ಹಸ್ತಲಾಘವವನ್ನಿತ್ತು ಅಂತಿಮ ಪಂದ್ಯದ ಟಾಸ್  ಚಿಮ್ಮಿ ತಂಡಗಳಿಗೆ ಶುಭ ಹಾರೈಸಿದರು. ಪಂದ್ಯಾಕೂಟವನ್ನು ಉದ್ಘಾಟಿಸಿದ ಅಸ್ಪೆನ್ ಇನ್ಪ್ರಾ ಪಡುಬಿದ್ರಿಯ ಮಹಾ ಪ್ರಬಂಧಕ ಅಶೋಕ್ ಶೆಟ್ಟಿ ಅವರು, ಪತ್ರಕರ್ತರು ನಿರಂತರ ತಮ್ಮ ಕಾರ್ಯನಿರತರಾಗಿದ್ದು ವಿಪರೀತ ಕಾರ್ಯ ಬಾಹುಳ್ಯದ ನಡುವೆಯೂ ಪಂದ್ಯಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯವೆಂದರು. ಮಾಜಿ ತಾ. ಪಂ. ಸದಸ್ಯ ನವೀನ್‌ಚಂದ್ರ ಶೆಟ್ಟಿ, ಉದ್ಯಮಿ ದೀಪಕ್ ಕುಮಾರ್ ಎರ್ಮಾಳು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿದರು.

ಕಾಪು ತಾ| ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ನಝೀರ್ ಪೊಲ್ಯ, ತಾಲೂಕು ಸಂಘದ ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ರೇಶ್ಮಾ ಮೆಂಡನ್, ರಜತ ಸಂಭ್ರಮ ಸಮಿತಿಯ ಸಂಚಾಲಕ ಮೊಹಮ್ಮದ್ ಶರೀಫ್ ಕಾರ್ಕಳ, ಸಾಮಾಜಿಕ ಕಾರ್ಯಕರ್ತ ಶೇಖರ್ ಹೆಜಮಾಡಿ ಉಪಸ್ಥಿತರಿದ್ದರು. ಹರೀಶ್ ಹೆಜಮಾಡಿ ಸ್ವಾಗತಿಸಿದರು. ಕಾಪು ತಾಲೂಕು ಸಂಘದ ಕ್ರೀಡಾ ಸಂಚಾಲಕ ರಾಕೇಶ್ ಕುಂಜೂರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸಂತೋಷ್ ಕಾಪು ವಂದಿಸಿದರು.