ಕಾಪು : ಉಡುಪಿ ಚಿಕ್ಕಮಗಳೂರು ಭಾಗದಲ್ಲಿ ಭಾರೀ ಅಂತರದ ಗೆಲುವು ಸಾಧಿಸಲಿದ್ದೇವೆ - ಕೋಟ ಶ್ರೀನಿವಾಸ ಪೂಜಾರಿ
Posted On:
30-03-2024 07:10PM
ಕಾಪು : ಬಿಜೆಪಿ ಪಕ್ಷವು ನಿಶ್ಚಲವಾದ ಬಹುಮತದೊಂದಿಗೆ ಭಾರೀ ಅಂತರದ ಗೆಲುವನ್ನು ಉಡುಪಿ ಚಿಕ್ಕಮಗಳೂರು ಭಾಗದಲ್ಲಿ ಗಳಿಸಲಿದೆ. ಈಗಾಗಲೇ ಪ್ರಥಮ ಸುತ್ತಿನ ಪ್ರಚಾರ ಮುಗಿದಿದೆ. ಏಪ್ರಿಲ್ 3 ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು
ಉಡುಪಿ ಚಿಕ್ಕಮಗಳೂರು ಬಿಜೆಪಿ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಶನಿವಾರ ಕಾಪುವಿನ ಹೋಟೆಲ್ K1 ನಲ್ಲಿ ನಡೆದ ಬಿಜೆಪಿ ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಮಂತ್ರಿಯೂ ಆಗಿ ಪಂಚಾಯತ್ ಸದಸ್ಯರ ಗೌರವ ಧನ ಹೆಚ್ಚಳ. ಮೀನುಗಾರಿಕೆ ಮಂತ್ರಿಯಾಗಿ ಹೆಜಮಾಡಿ ಬಂದರಿಗೆ 181ಕೋಟಿ ರೂ. ಬಿಡುಗಡೆ ಮಾಡಿಸಿ ಮುಖ್ಯಮಂತ್ರಿಯಿಂದ ಶಿಲಾನ್ಯಾಸ ಕಾರ್ಯ, 22,000 ಜನ ಮಹಿಳೆಯರಿಗೆ ಸಾಲ ಮನ್ನ ಮಾಡಿಸಿದ ಸಮಾಧಾನವಿದೆ. ಹಿಂದುಳಿದ ವರ್ಗದ ಮಂತ್ರಿಯಾಗಿದ್ದಾಗ 36,000 ಬಡ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ, 4 ನಾರಾಯಣಗುರು ವಸತಿ ಶಾಲೆ, ಉಡುಪಿಯಲ್ಲಿ ಅಗ್ನಿ ಪಥ್ ಶಿಬಿರ ಏರ್ಪಡಿಸಿದ್ದೇನೆ. ಈ ಎಲ್ಲಾ ಕಾರ್ಯಗಳ ಜೊತೆಗೆ ಪ್ರಧಾನ ಮಂತ್ರಿ ಮೋದಿಯವರ ನೇತೃತ್ವದಲ್ಲಿ ಈ ಬಾರಿ ಚುನಾವಣೆಯನ್ನು ಗೆಲ್ಲಲಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ ಮಾತನಾಡಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಖಂಡಿತವಾಗಿಯೂ ಈ ಬಾರಿ ಲೋಕಸಭೆ ಪ್ರವೇಶಿಸಲಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಕಾಂಗ್ರೆಸ್ ಪಕ್ಷ ದಿಗ್ಭ್ರಮೆಗೊಂಡಿದೆ. ಜೆಡಿಎಸ್ ಸದಸ್ಯ ಬಲ ಕಡಿಮೆ ಇರಬಹುದು ಆದರೆ ಪಕ್ಷದ ವರಿಷ್ಠರ ಆಣತಿಯಂತೆ ನಿಷ್ಠೆಯಿಂದ ಕೆಲಸ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಬಿಜೆಪಿ ಪ್ರಮುಖರಾದ ಕುಯಿಲಾಡಿ ಸುರೇಶ್ ನಾಯಕ್, ಗೀತಾಂಜಲಿ ಸುವರ್ಣ, ನವೀನ್ ಶೆಟ್ಟಿ ಕುತ್ಯಾರು, ಗೋಪಾಲಕೃಷ್ಣ ರಾವ್, ಜೆಡಿಎಸ್ ಪ್ರಮುಖರಾದ ವಾಸುದೇವ ರಾವ್ ಮುಂತಾದವರು ಉಪಸ್ಥಿತರಿದ್ದರು.