ಕಾಪು : ಸಂವಿಧಾನ ಶಿಲ್ಪಿ, ನೊಂದವರ ದನಿ, ಸಮಾನತಾವಾದಿ, ಶೋಷಿತರ ಆಶಾಕಿರಣ
ಡಾ ಅಂಬೇಡ್ಕರ್ ರವರು ಸಾರ್ವಕಾಲಿಕ ಆದರ್ಶ ಮತ್ತು ಚಿಂತನೆಗಳನ್ನು ಹೊಂದಿದ್ದರು. ಅವರ ಚಿಂತನೆಗಳು ಭಾರತದ ಭವ್ಯ ಭವಿಷ್ಯದ ರೂವಾರಿ ಈ ಮಹಾಪುರುಷ. ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್. ಪ್ರತಿ ವರ್ಷ ಏಪ್ರಿಲ್ 14 ರಂದು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅಪಾರ ಎಂದು ಕಾಪು ತಾಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್. ಹೇಳಿದರು.
ಡಾ.ಬಿ. ಆರ್. ಅಂಬೇಡ್ಕರ್ ಭಾರತದ ಹೆಮ್ಮೆಯ ಪುತ್ರ. ನಮ್ಮ ರಾಷ್ಟ್ರ ಕಂಡ ಶ್ರೇಷ್ಠ ನಾಯಕರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಪ್ರಮುಖರು. ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅವರು ಸಾಮಾಜಿಕವಾಗಿ ಮೂಡಿಸಿದ ಸಂಚಲನಗಳು ಅಷ್ಟು ಹಿರಿದಾಗಿದ್ದವು. ಇವರ ತತ್ವ ಆದರ್ಶಗಳು ಸುಂದರ ಸಮಾಜವನ್ನು ನಿರ್ಮಿಸುವಂತಿದೆ. ಅದೂ ಅಲ್ಲದೆ, ಪ್ರತಿಯೊಬ್ಬ ಭಾರತೀಯರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು.
ಈ ಸಂದರ್ಭ ಸಹಾಯಕ ಚುನಾವಣಾಧಿಕಾರಿ ಜಯಮಾಧವ, ಉಪ ತಹಶಿಲ್ದಾರ್ ಗಳಾದ ರವಿಕಿರಣ್, ಅಶೋಕ್ ಎನ್ ಕೋಟೇಕಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.