ಏ. 22- 30 : ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ, ನಾಗಮಂಡಲ, ಜಾತ್ರಾ ಮಹೋತ್ಸವ
Posted On:
16-04-2024 06:17PM
ಶಿಬರೂರು : ಇಲ್ಲಿನ ಕೊಡಮಣಿತ್ತಾಯ ಕ್ಷೇತ್ರದಲ್ಲಿ
ಏಪ್ರಿಲ್ 22ರಿಂದ 30ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪುದ್ಯುಮ್ನ ರಾವ್, ಕೈಯ್ಯೂರಗುತ್ತು ಹೇಳಿದರು.
ಅವರು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಮಂಗಳವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಏಪ್ರಿಲ್ 26ರಂದು ಶ್ರೀ ಉಳ್ಳಾಯ ಕೊಡಮಣಿತ್ತಾಯ ದೈವಗಳಿಗೆ ಬ್ರಹ್ಮಕುಂಭಾಭಿಷೇಕವು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ಶಿಬರೂರುರವರ ನೇತೃತ್ವದಲ್ಲಿ ಜರಗಲಿದ್ದು ಅದೇ ದಿನ ರಾತ್ರಿ ಕ್ಷೇತ್ರದ ನಾಗಮಂಡಲ ಸೇವೆ ಜರುಗಲಿದೆ. ಏಪ್ರಿಲ್ 27ರಿಂದ 30ರ ತನಕ ವಿಶೇಷ ಜಾತ್ರಾ ಮಹೋತ್ಸವವು ಜರಗಲಿದೆ.
ಕೊಡಮಣಿತ್ತಾಯನ ಮೇಲಿನ ಭಕ್ತಿಯಿಂದ ಚಿನ್ನದ ಪಲ್ಲಕ್ಕಿಗಾಗಿ ಭಕ್ತರು ತಮ್ಮ ಒಡವೆಯನ್ನೇ ದಾನ ರೂಪವಾಗಿ ನೀಡಿದ 2 ಕೋಟಿ ಮೌಲ್ಯದ ಸ್ವರ್ಣ ಪಲ್ಲಕ್ಕಿಯನ್ನು ಏಪ್ರಿಲ್ 19 ರಂದು ಶ್ರೀ ಕ್ಷೇತ್ರ ಕಟೀಲಿನಿಂದ ಸಂಜೆ 4 ಗಂಟೆಗೆ ವಿಜೃಂಭಣೆಯ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಊರ ಪರವೂರ ಭಕ್ತರು ಸೇವೆಯ ರೂಪದಲ್ಲಿ ಸಲ್ಲಿಸಲಿದ್ದಾರೆ. ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಸ್ವಾಮೀಜಿಗಳ ಸಮಕ್ಷಮದಲ್ಲಿ ಧಾರ್ಮಿಕ ಮುಖಂಡರ ಹಾಗೂ ಅನೇಕ ಸಾಂಸ್ಕೃತಿಕ ತಂಡಗಳ ಹಾಗೂ ಭಜನಾ ಮಂಡಳಿಗಳ ಮುಖಾಂತರ ನಿರಂತರ ಭಜನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ.
ಕಟೀಲು ಕ್ಷೇತ್ರಕ್ಕೂ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅವಿನಾಭಾವ ನಂಟಿದೆ. ಕಟೀಲು ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇವಿ ಮತ್ತು ದೈವದ ಭೇಟಿ ಅಪರೂಪವಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ದೇಶ ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಭಕ್ತರು ದೈವದ ಸೇವೆಯಲ್ಲಿ ಕೈಜೋಡಿಸಲಿದ್ದಾರೆ.
ಕಳೆದ 8 ತಿಂಗಳಲ್ಲಿ 3.5 ಕೋಟಿ ವೆಚ್ಚದ ಸಿವಿಲ್ ಕಾಮಗಾರಿ, 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ನಿತ್ಯ ಉಪಹಾರ, ಅನ್ನದಾನ ನಡೆಯಲಿದ್ದು ರಾಜ್ಯಾದ್ಯಂತ 3-4 ಲಕ್ಷ ಜನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 22 ಸಮಿತಿಗಳನ್ನು ರಚಿಸಲಾಗಿದ್ದು, ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ನಿರ್ಧರಿಸಲಾಗಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಯೊಂದಿಗೆ ಮೂರು ದಿನಗಳ ಕಾಲ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಿಲ್ಪಾ ಶೆಟ್ಟಿ ಬೆಳ್ಳಿಯ ಕಲಶ ನೀಡಿದ್ದಾರೆ. ಕೊಡಮಣಿತ್ತಾಯನ ಮೇಲಿನ ಭಕ್ತಿಯಿಂದ ಚಿನ್ನದ ಪಲ್ಲಕ್ಕಿಗಾಗಿ ಭಕ್ತರು ತಮ್ಮ ಒಡವೆಯನ್ನೇ ದಾನ ರೂಪವಾಗಿ ನೀಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕೋಂಜಾಲಗುತ್ತು ಪ್ರಭಾಕರ ಎಸ್ ಶೆಟ್ಟಿ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಿಬರೂರು ಗುತ್ತು ಉಮೇಶ್ ಎನ್ ಶೆಟ್ಟಿ, ಪರ್ಲಬೈಲುಗುತ್ತು ತುಕಾರಾಮ ಶೆಟ್ಟಿ, ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ಮಧುಕರ್ ಅಮೀನ್, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಸುಬ್ರಮಣ್ಯ ಪ್ರಸಾದ್ ಕೋರ್ಯಾರು
ಮತ್ತಿತರರು ಉಪಸ್ಥಿತರಿದ್ದರು.