ಕಾಪು : ವಿಧಾನ ಸಭಾ ಕ್ಷೇತ್ರದಲ್ಲಿ 209 ಬೂತ್ ಗಳಲ್ಲಿ ಮತದಾನ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದ್ದು, ಜನರು ಬಿಸಿಲ ಬೇಗೆ, ಮದುವೆ ಇನ್ನಿತರ ಕಾರ್ಯಕ್ರಮದ ನಿಮಿತ್ತ ಬೇಗನೆ ಮತಗಟ್ಟೆಗೆ ತೆರಳಿ ಮತ ಚಲಾಯಿಸುವುದು ಕಂಡು ಬಂದಿದೆ.
ಕಾಪು ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆಗಳಿಗಾಗಿ 1715 ಮಂದಿ ಅಧಿಕಾರಿಗಳು ಮತ್ತು ಸಿಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಮತಗಟ್ಟೆಗಳ ವಿಂಗಡಣೆ : ಕೈಪುಂಜಾಲು ಶಾಲೆ, ದಂಡತೀರ್ಥ ಶಾಲೆ, ಕಾಪು ಪಡು ಸರಕಾರಿ ಮಾದರಿ ಶಾಲೆ, ಮಲ್ಲಾರು ಜನರಲ್ ಶಾಲೆ, ಮೂಳೂರು ಸರಕಾರಿ ಶಾಲೆಗಳಲ್ಲಿ ಸಖಿ ಮತಗಟ್ಟೆಗಳನ್ನಾಗಿ,
ಕಟಪಾಡಿ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಚೇತನರ ನಿರ್ವಹಣೆ, ಬೆಳಪು ಸರಕಾರಿ ಪ್ರೌಢಶಾಲಾ ಮತಗಟ್ಟೆಯನ್ನು ಯುವಜನ ನಿರ್ವಹಣೆ, ಪಾದೂರು ಬಾಷೆಲ್ ಮಿಷನ್ ಶಾಲೆ ಮತಗಟ್ಟೆಯನ್ನು ಧ್ಯೇಯ ಆಧಾರಿತ, ಎರ್ಮಾಳು ತೆಂಕ ಸರಕಾರಿ ಮಾದರಿ ಶಾಲೆಯ ಮತಗಟ್ಟೆಯನ್ನು ಸಾಂಪ್ರದಾಯಿಕ ಮತಗಟ್ಟೆಯನ್ನಾಗಿ, ಪೆರ್ಡೂರು ಬಾಷೆಲ್ ಮಿಷನ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಕೈಪುಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡುಬಿದ್ರಿ ನಡ್ಸಾಲು ಕಂಚಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯನ್ನು ಅತೀಸೂಕ್ಷ್ಮ ಮತಗಟ್ಟೆಯನ್ನಾಗಿ ವಿಂಗಡಿಸಲಾಗಿದೆ.
ಮೊಬೈಲ್ ಬಳಕೆ ನಿಷಿದ್ಧ : ಮತದಾನ ವೇಳೆ ಮೊಬೈಲ್ ಕೊಂಡೊಯ್ಯುವುದಕ್ಕೆ ನಿರ್ಬಂಧ ಹೇರಲಾಗಿದೆ. ಮತದಾನದ ವಿಡಿಯೋ ಮಾಡಿಕೊಳ್ಳುವ ಸಾಧ್ಯತೆ ಇರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆ ಹೊರಗೆ ಮೊಬೈಲ್ ಇಟ್ಟು ಹೋಗಲು ಸೂಚನೆ ನೀಡಲಾಗುತ್ತಿದೆ.
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ
ಮೊದಲ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ.