ಬೆಳ್ತಂಗಡಿ : ಮಾಜಿ ಶಾಸಕ ವಸಂತ್ ಬಂಗೇರ ನಿಧನ
Posted On:
08-05-2024 06:53PM
ಬೆಳ್ತಂಗಡಿ : ಕಾಂಗ್ರೆಸ್ ಮುಖಂಡ, ಬಿಲ್ಲವ ಸಮಾಜದ ನಾಯಕ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ವಸಂತ್ ಬಂಗೇರ ಇಂದು ಸಂಜೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಂಗೇರ ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ ಬಂಗೇರ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಕಳೆದ ಹಲವು ತಿಂಗಳಿನಿಂದ ನಿರಂತರ ಚಿಕಿತ್ಸೆಗೆ ಒಳಗಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ವಸಂತ ಬಂಗೇರ 1946ರ ಜನವರಿ 15ರಂದು ಬೆಳ್ತಂಗಡಿಯಲ್ಲಿ ಜನಿಸಿದ್ದರು. ಬೆಳ್ತಂಗಡಿಯಲ್ಲಿ ಐದು ಬಾರಿಯ ಶಾಸಕರಾಗಿದ್ದರು. 1985ರಲ್ಲಿ ಮತ್ತೆ ಭಾಜಪ ಬೆಂಬಲದಿಂದ ಸ್ಪರ್ಧಿಸಿ ಶಾಸಕರಾದರು. 1989ರಲ್ಲಿ ಬಿಜೆಪಿಯನ್ನು ತೊರೆದು ಜಾತ್ಯಾತೀತ ಜನತಾದಳಕ್ಕೆ ಸೇರ್ಪಡೆಗೊಂಡು ಸ್ಪರ್ಧಿಸಿ, ಸೋತಿದ್ದರು.1994ರಲ್ಲಿ ಜಾತ್ಯಾತೀತ ಜನತಾದಳದಿಂದ ಸ್ಪರ್ಧಿಸಿದ್ದ ಕೆ. ವಸಂತ ಬಂಗೇರ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಈ ಅವಧಿಯಲ್ಲಿ ಬಂಗೇರರು ವಿಧಾನ ಸಭೆಯ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದರು. 1999ರಲ್ಲಿ ಮತ್ತು 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಂಗೇರರು ಸೋಲು ಅನುಭವಿಸಿದ್ದರು. 2008ರ ವಿಧಾನ ಸಭಾ ಚುನಾವಣೆಯಲ್ಲಿ ಬಂಗೇರರು ಜೆಡಿಎಸ್ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕಾಂಗ್ರೆಸ್ ಬೆಂಬಲದಲ್ಲಿ ಸ್ಪರ್ಧಿಸಿ ನಾಲ್ಕನೇ ಅವಧಿಗೆ ಶಾಸಕರಾಗಿ ಚುನಾಯಿತರಾಗುವಲ್ಲಿ ಯಶಸ್ವಿಯಾದರು. 2013ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಮತ್ತೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಬಂಗೇರ ಅವರ ಪಾರ್ಥಿವ ಶರೀರ ಮೇ 9ರಂದು ಮುಂಜಾನೆ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.