ಕಾಪು : ಸನಾತನ ಧರ್ಮವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ - ಹಿರಿಯ ನಟ ದೊಡ್ಡಣ್ಣ
Posted On:
13-05-2024 05:35PM
ಕಾಪು : ಇಲ್ಲಿನ ಲಕ್ಷ್ಮಿಜನಾರ್ಧನ ದೇವಸ್ಥಾನಕ್ಕೆ ಸೋಮವಾರ ಹಿರಿಯ ನಟ ದೊಡ್ಡಣ್ಣ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಜನಾರ್ಧನ್ ಭಟ್ ದೇವಸ್ಥಾನದ ವತಿಯಿಂದ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಅವರು ಸೂರ್ಯ ಚಂದ್ರ ಯಾವತ್ತು ಸ್ಥಾಪಿತರಾದರೋ ಆವತ್ತಿನಿಂದಲೇ ಸನಾತನ ಧರ್ಮ ಉಳಿದುಕೊಂಡಿದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಹಿರಿಯರಿಗೆ 90 ವರ್ಷವಾದರೂ ಯಾವುದೇ ಆರೋಗ್ಯ ಸಮಸ್ಯೆ ಇರುತ್ತಿರಲಿಲ್ಲ. ಅವರು ಇನ್ನೊಬ್ಬರ ಖುಷಿಗೋಸ್ಕರ ಜೀವನ ಮಾಡಿ ತಮ್ಮ ತೃಪ್ತಿಯನ್ನು ಅದರಲ್ಲಿ
ಕಾಣುತ್ತಿದ್ದರು. ನಮ್ಮ ದೇಸಿಯ ಅಡುಗೆಗಳನ್ನು ತಿನ್ನುತ್ತಿದ್ದರು. ಇವತ್ತಿನ ವಿದ್ಯಾವಂತರು ಪಿಜ್ಜಾ, ಬರ್ಗರ್ ತಿಂದು 30 ವರ್ಷಕ್ಕೆ ಸಕ್ಕರೆ ಕಾಯಿಲೆ, 45ಕ್ಕೆ ಕ್ಯಾನ್ಸರ್ ಬರುತ್ತಿದೆ. ಮೊಬೈಲ್ ಬಳಕೆ ಕಡಿಮೆ ಮಾಡಿ ನಮ್ಮಲ್ಲಿರುವ ಗ್ರಂಥ ಭಂಡಾರವನ್ನು ಓದಿ ಜೊತೆಗೆ ದೇವರ ಸ್ಮರಣೆಯನ್ನು ಮಾಡಿ ಎಂದರು.
ಈ ಸಂದರ್ಭ ದೇವಸ್ಥಾನದ ವಠಾರದಲ್ಲಿ ಗಿಡ ನೆಡುವ ಮೂಲಕ ವೃಕ್ಷ ಸಂರಕ್ಷಣೆಗೆ ಪ್ರೋತ್ಸಾಹ ನೀಡಿದರು.
ಜೋತಿಷ್ಯ ವಿದ್ವಾನ್ ಪ್ರಕಾಶ್ ಅಮ್ಮಣ್ಣಾಯ, ಗಿರೀಶ್ ಪಾತ್ರಿ, ಸಂದೀಪ್ ಶೆಟ್ಟಿ, ಲಕ್ಷ್ಮಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.