ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮೇ 18 : ಶ್ರೀ ಪಲಿಮಾರು ಮೂಲ ಮಠದಲ್ಲಿ ವಿಹಿತಮ್ ಕಾರ್ಯಕ್ರಮ

Posted On: 16-05-2024 09:54AM

ಪಲಿಮಾರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ 18 ರಿಂದ 40 ರ ವಯೋಮಿತಿಯ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ ವಿಹಿತಮ್ ಮತ್ತು ಪೇಜಾವರ ಶ್ರೀಗಳ ಅಭಿನಂದನ ಸಮಾರಂಭವು ಮೇ 18, ಶನಿವಾರ ಪಲಿಮಾರು ಮೂಲ ಮಠದಲ್ಲಿ ನಡೆಯಲಿದೆ ಎಂದು ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು. ಅವರು ಬುಧವಾರ ಪಲಿಮಾರು ಮೂಲ ಮಠದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ವಿಹಿತಮ್ ಸಮಾವೇಶವು ಹಿಂದೂ ಸಮಾಜದ ಭಾಗವಾದ ಬ್ರಾಹ್ಮಣ ಸಮಾಜದಲ್ಲಿಯ ಯುವಕರನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ಅತಿಥಿಗಳಾಗಿದ್ದು, ವಿಚಾರಗೋಷ್ಠಿಗಳ ಮೂಲಕ ಚಿಂತನ ಮಂಥನ ನಡೆಯಲಿದೆ ಎಂದರು.

ಪಲಿಮಾರು ಮಠದ ದಿವಾನರಾದ ಜಿ.ವಾಸುದೇವ ಭಟ್ ಪೆರಂಪಳ್ಳಿ ಮಾತನಾಡಿ ಬ್ರಾಹ್ಮಣ ಸಮಾಜದ ಜೀವನಕ್ರಮ, ಅದರ ಸಂರಕ್ಷಣೆ, ವರ್ತಮಾನದ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜ ಆಂತರಿಕ ಮತ್ತು ಬಾಹ್ಯವಾಗಿ ಎದುರಿಸುತ್ತಿರುವ ಗಂಭೀರ ಸವಾಲುಗಳ ಬಗ್ಗೆ ಯುವ ಮನಸ್ಸುಗಳ ನಡುವೆ ಚಿಂತನ ಮಂಥನ ಹಾಗೂ ಬ್ರಾಹ್ಮಣರ ಸಂಘಟನಾತ್ಮಕ ಪ್ರಕ್ರಿಯೆಗಳಿಗೆ ಒಂದು ಶಕ್ತಿ ಮತ್ತು ಪ್ರೇರಣೆಯನ್ನು ನೀಡಬೇಕೆಂಬ ಉದ್ದೇಶದಿಂದ ವಿಹಿತಮ್ ಸಮಾವೇಶ ಹಮ್ಮಿಕೊಂಡಿದ್ದೇವೆ. ಉಭಯ ಜಿಲ್ಲೆಗಳ 18-40 ವಯಸ್ಸಿನ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸ ಮತ್ತುಉದ್ಯೋಗ ವ್ಯವಹಾರಗಳನ್ನು ನಡೆಸುತ್ತಿರುವ ಯುವಕರನ್ನು ಹಾಗೂ ಬೆಂಗಳೂರು, ಮೈಸೂರು ಹಾಗೂ ಇತರೆಡೆ ನೆಲೆಸಿರು ಕರಾವಳಿ ಮೂಲದ ತ್ರಿಮತಸ್ಥ ಯುವಕರನ್ನು ಆಹ್ವಾನಿಸಲಾಗಿದೆ. ಸುಮಾರು 600 ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಜೊತೆಗೆ ಅವರನ್ನು ಅಭಿನಂದಿಸಲಾಗುವುದು. ವಿವಿಧ ಮಠಗಳ ಮಠಾಧಿಪತಿಗಳಿಂದ ಮಾರ್ಗದರ್ಶನ, ವಿವಿಧ ಕ್ಷೇತ್ರದ ಸಾಧಕರು ಉಪಸ್ಥಿತರಿರುವರು. ಬ್ರಾಹ್ಮಣರ ಅನನ್ಯ ಜೀವನ ಕ್ರಮ ಮತ್ತು ಸಂರಕ್ಷಣೆಯ ಅಗತ್ಯತೆ, ಬ್ರಾಹ್ಮಣ ಸಮಾಜದ ಆಂತರಿಕ ಮತ್ತು ಬಾಹ್ಯ ಸವಾಲುಗಳು ಮತ್ತು ಪರಿಹಾರೋಪಾಯಗಳ ವಿಚಾರದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ವಿಷ್ಣು ಆಚಾರ್ಯ, ಪ್ರಣವ್ ಆಚಾರ್ಯ, ರಾಹುಲ್ ಬಾರಿತ್ತಾಯ, ಶಶಾಂಕ್ ಶಿವತ್ತಾಯ ಮತ್ತಿತರರು ಉಪಸ್ಥಿತರಿದ್ದರು.