ಟೋಲ್ ನಲ್ಲಿ ಸ್ಥಳೀಯ ವಾಹನಗಳಿಗೆ ನೀಡಿದ ವಿನಾಯಿತಿ ರದ್ದು ಪಡಿಸಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ : ಶೇಖರ್ ಹೆಜ್ಮಾಡಿ
Posted On:
18-05-2024 09:58PM
ಹೆಜಮಾಡಿ : ಹೆಜಮಾಡಿ, ಸಾಸ್ತಾನ ಹಾಗು ತೊಕ್ಕೊಟ್ಟು ಟೋಲ್ ಪ್ಲಾಜಾಗಳನ್ನು ಹೊಸ ಕಂಪನಿಯು ಟೋಲ್ ಸಂಗ್ರಹಕ್ಕೆ ಗುತ್ತಿಗೆ ಪಡೆದಿದ್ದು, ಈ ಹಿಂದೆ 2016 ರಿಂದ ನಿರಂತರವಾಗಿ ಹೋರಾಟ ಮಾಡುವುದರ ಮೂಲಕ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿಯನ್ನು ಪಡೆದಿರುತ್ತೇವೆ. ಸದ್ಯ ಟೋಲ್ ಪ್ಲಾಜಾದ ಅಧಿಕಾರಿಗಳು ಸ್ಥಳೀಯ ವಾಹನಗಳು ಟೋಲ್ ನಲ್ಲಿ ಸಂಚಾರಿಸಿದಾಗ ಅವರ ಪಾಸ್ಟ್ ಟಾಗ್ ನಿಂದ ಹಣ ಕಡಿತಗೊಳಿಸುವ ಪ್ರಕ್ರಿಯೆ ಬಗ್ಗೆ ಸ್ಥಳೀಯ ವಾಹನ ಮಾಲೀಕರಿಂದ ದೂರುಗಳು ಬಂದಿರುತ್ತದೆ. ಸ್ಥಳೀಯರಿಗೆ ನೀಡಿದ ಟೋಲ್ ವಿನಾಯಿತಿಯನ್ನು ಸಂಪೂರ್ಣ ಕಿತ್ತು ಹಾಕುವ ಹುನ್ನಾರವಿದು.
ಟೋಲ್ ಪ್ಲಾಜಾದಲ್ಲಿ ಕಂಪನಿಯು ಕೋಟ್ಯಾಂತರ ರೂಪಾಯಿಯನ್ನು ಸಾರ್ವಜನಿಕರಿಂದ ಟೋಲ್ ನೆಪದಲ್ಲಿ ಸಂಗ್ರಹಿಸಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ನೀಡುವಲ್ಲಿ ವಿಫಲಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯ ದುರವಸ್ಥೆಯನ್ನು ಹೇಳತಿರದು. ದಿನನಿತ್ಯ, ಪ್ರತಿ ಕ್ಷಣ ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರ ಅಮೂಲ್ಯ ಜೀವಗಳು ಬಲಿಯಾಗುತ್ತಿರುವುದು ರೂಢಿಯಾಗಿದೆ.
ಈ ಬಗ್ಗೆ ಕಂಪನಿಯು ಯಾವುದೇ ಪರಿಹಾರವನ್ನು ನೀಡುವುದಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಜಮಾಡಿ ಟೋಲ್ ನಲ್ಲಿ ಸ್ಥಳೀಯ ಲೋಕೋಪಯೋಗಿ ರಸ್ತೆಗೆ ಟೋಲ್ ನಿಗದಿಪಡಿಸಿದ್ದು ಕಂಪನಿಯ ಕಾನೂನು ಬಾಹಿರ ಕ್ರಮವಾಗಿರುತ್ತದೆ. ಅನೇಕ ಹೋರಾಟಗಳ ಮೂಲಕ ಸ್ಥಳೀಯ ಯುವ ಜನರಿಗೆ ಉದ್ಯೋಗವನ್ನು ನೀಡಿದ್ದು, ಸದ್ಯ ಸ್ಥಳೀಯ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯು ಕಂಪನಿಯಿಂದ ನಡೆಯುತ್ತಿರುವುದು ಕಂಡು ಬಂದಿದೆ.
ಸ್ಥಳೀಯ ವಾಹನಗಳಿಗೆ ಈ ಹಿಂದೆ ನೀಡಿದ ವಿನಾಯಿತಿಯನ್ನು ವಜಾಗೊಳಿಸಿದರೆ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡುವುದರ ಮೂಲಕ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಜನಪ್ರತಿನಿಧಿಗಳ, ವಾಹನ ಮಾಲಿಕರ ಹಾಗು ಸಾರ್ವಜನಿಕರ ಸಭೆಯನ್ನು ಕರೆದು ಚರ್ಚಿಸಿ ಮುಂದಿನ ಹೋರಾಟಗಳ ರೊಪರೇಷೆಗಳನ್ನು ಸಿದ್ದ ಪಡಿಸಲಾಗುವುದು ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷರಾದ ಶೇಖರ ಹೆಜ್ಮಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.