ಉಡುಪಿ : ಮನೆಯೇ ಗ್ರಂಥಾಲಯ - ವಿನೂತನ ಕಾರ್ಯಕ್ರಮಕ್ಕೆ ಚಾಲನೆ
Posted On:
22-05-2024 04:12PM
ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ "ಮನೆಯೇ ಗ್ರಂಥಾಲಯ" ಕಾರ್ಯಕ್ರಮಕ್ಕೆ ನಾಡಿನ ಪ್ರಸಿದ್ಧ ಸಾಹಿತಿ ವಿದ್ವಾಂಸ ನಾಡೋಜ ಡಾ. ಕೆ .ಪಿ .ರಾವ್ ಅವರು ಉಡುಪಿಯ ಬೈಲೂರಿನಲ್ಲಿರುವ ರಂಗ ಕಲಾವಿದರಾದ ಶಶಿಪ್ರಭಾ ಹಾಗೂ ವಿವೇಕಾನಂದ ದಂಪತಿಗಳ ಮನೆ "ವಾಟಿಕಾ"ದಲ್ಲಿ ಚಾಲನೆ ನೀಡಿದರು.
ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಎನ್ನುವಂತದ್ದು ಇವತ್ತಿನ ಆಧುನಿಕ ಸಂದರ್ಭದಲ್ಲಿ ಎಲ್ಲಾ ಸಾಧ್ಯತೆಗಳನ್ನು ಇಟ್ಟುಕೊಂಡು ಬೆಳೆಯುತ್ತಿದೆ. ಆದರೆ ಅನೇಕ ಶತಮಾನಗಳ ಹಿಂದೆ ನಾವು ಕಂಡುಕೊಂಡ ಮುದ್ರಣ ಮಾಧ್ಯಮದ ಆವಿಷ್ಕಾರದಿಂದಾಗಿ ಗಳಿಸಿದ ಜ್ಞಾನ ಸಂಪತ್ತನ್ನು ಅಕ್ಷರ ರೂಪವಾಗಿ ಪರಿವರ್ತಿಸಿ, ಮುಂದೆ ಅವುಗಳನ್ನು ಮುದ್ರಣ ರೂಪದಲ್ಲಿ ದಾಖಲೀಕರಣ ಗೊಳಿಸಿರುವುದರ ಪರಿಣಾಮವಾಗಿ ನಮಗಿಂದು ಕೋಟಿ ಕೋಟಿ ಗ್ರಂಥಗಳು ನಮ್ಮ ಅಧ್ಯಯನಕ್ಕೆ ಸಾಧ್ಯವಾಗಿವೆ, ಮುಂದೆಯೂ ಇವು ಸಾಧ್ಯವಾಗುತ್ತವೆ. ಅಷ್ಟು ಮಾತ್ರವಲ್ಲ ಒಂದು ಗ್ರಂಥವನ್ನು ತೆರೆದು ಅದರೊಳಗಿನ ಒಂದು ಪುಟದ ಸುವಾಸನೆಯನ್ನು ಗಮನಿಸಿದಾಗ ಅಲ್ಲಿ ಸಿಗುವ ಆನಂದವೇ ಬೇರೆ ಆಗಿರುತ್ತದೆ ಅದನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಅಂತಹ ಅನುಭವವನ್ನು ಗ್ರಂಥಗಳನ್ನು ಸ್ಪರ್ಶಿಸುವುದರಿಂದ ಆಗುವುದೇ ಹೊರತು ಬೇರೆ ಯಾವುದರಿಂದಲೂ ಆಗುವುದಿಲ್ಲ ಎಂದು ನಾಡೋಜ ಕೆ. ಪಿ. ರಾವ್ ಅವರು ತಿಳಿಸಿದರು.
ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಆಶಯ ನುಡಿಗಳನ್ನಾಡುತ್ತಾ ಇದೊಂದು ವಿನೂತನ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಉಡುಪಿ ತಾಲೂಕಿನ ಮನೆ ಮಂದಿರಗಳಲ್ಲಿ ಆಸ್ಪತ್ರೆಗಳಲ್ಲಿ ಅಂಗಡಿಗಳಲ್ಲಿ ಗ್ರಂಥಾಲಯ ಪ್ರಾರಂಭಿಸುತ್ತೇವೆ .
ಈ ಮೂಲಕ ಓದುವ ಹವ್ಯಾಸ ಬೆಳೆಸಲು ಪ್ರಯತ್ನಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಜಿಲ್ಲಾ ಸಹಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ ,ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿ, ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ ಧನ್ಯವಾದ ನೀಡಿದರು. ಕಾರ್ಯಕ್ರಮದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.