ಕಾಪು : ಕಾರಿನಲ್ಲಿ ಮಾರಕಾಯುಧಗಳೊಂದಿಗೆ ಸಂಚರಿಸುತ್ತಿದ್ದ ಆರು ಮಂದಿಯನ್ನು ಕಾಪು ಪೊಲೀಸರು ಕಾಪು ಸಮೀಪದ ಕೋತಲಕಟ್ಟೆ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮುಲ್ಕಿಯ ಅಮಿತ್ ರಾಜ್, ಕಾಟಿಪಳ್ಳದ ಪ್ರಕಾಶ್, ವಾಮಂಜೂರು ನೀರುಮಾರ್ಗದ ವರುಣ್, ಸುರತ್ಕಲ್ ನ ಕಾರ್ತಿಕ್ ಶೆಟ್ಟಿ, ಕಾಟಿಪಳ್ಳದ ಅಭಿಷೇಕ್, ಫರಂಗಿಪೇಟೆಯ ಶ್ರೀಕಾಂತ್ ಶ್ರೀಪತಿ ವಶಕ್ಕೆ ಪಡೆದ ಆರೋಪಿಗಳು. ಇವರಿಂದ ಕಾರು, ಮಾರಕಾಯುಧಗಳು ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಉದ್ಯಾವರದ ಬಳಿ ಕಾರಿನಲ್ಲಿ ಹೋಗುತ್ತಿದ್ದ ಆರೋಪಿಗಳ ಬಗ್ಗೆ ಅನುಮಾನಗೊಂಡ ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಆರೋಪಿಗಳು ಕಾರನ್ನು ನಿಲ್ಲಿಸದೆ ಕಾಪು ಕಡೆ ಪರಾರಿ ಯಾದರು. ಬಳಿಕ ಈ ಬಗ್ಗೆ ಕಾಪು ಠಾಣೆಗೆ ಮಾಹಿತಿ ನೀಡಿದ ಜಯಶ್ರೀ ಮಾನೆ, ಆರೋಪಿಗಳ ವಾಹನವನ್ನು ಬೆನ್ನಟ್ಟಿ ಕೊಂಡು ಬಂದರೆನ್ನಲಾಗಿದೆ.
ಅದೇ ರೀತಿ ಅತ್ತ ಅಲಟ್೯ ಆದ ಕಾಪು ಠಾಣೆಯ ಎಸ್ ಐ ಅಬ್ದುಲ್ ಖಾದರ್ ಇನ್ನೊಂದು ವಾಹನದಲ್ಲಿ ಆರೋಪಿಗಳ ವಾಹನವನ್ನು ಬೆನ್ನಟ್ಟಿಕೊಂಡು ಬಂದರು. ಕಾಪುವಿನ ಕೋತಲ್ ಕಟ್ಟೆ ಬಳಿ ಆರೋಪಿಗಳ ವಾಹನವನ್ನು ತಡೆದು ಅದರಲ್ಲಿದ್ದ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡರು ಎಂದು ತಿಳಿದುಬಂದಿದೆ.
ವಾಹನವನ್ನು ತಪಾಸಣೆ ಮಾಡಿದಾಗ ಅದರೊಳಗೆ ಮಾರಕಾಯುಧಗಳು ಹಾಗೂ ಇತರ ವಸ್ತುಗಳು ಕಂಡು ಬಂದಿದ್ದು ಆರೋಪಿಗಳು ಯಾವ ಕೃತ್ಯಕ್ಕೆ ಸಂಚುರೂಪಿಸಿದ್ದಾರೆ ಎಂಬುದು ತನಿಖೆಯಿಂದ ಹೊರ ಬರಬೇಕಾಗಿದೆ.