ಕೊರಗಜ್ಜನ ಅಭಯ - ಕೈ ಸೇರಿದ ಕಳವಾದ ದ್ವಿಚಕ್ರ ವಾಹನ ; ಭಕ್ತನಿಂದ ನಿತ್ಯವೂ ಸ್ವಚ್ಛತೆಯ ಕಾಯಕದ ಪ್ರಮಾಣ
Posted On:
12-06-2024 04:55PM
ಉಡುಪಿ : ಇಲ್ಲಿಯ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಕೆಲಸಕಿದ್ದ ಪ್ರವೀಣ್ ಸೇರಿಗಾರ್ ರ ದ್ವಿಚಕ್ರ ವಾಹನ ಕಳವಾಗಿ ಮಾನಸಿಕವಾಗಿ ಕುಗ್ಗಿದಾಗ ಹೋಟೆಲ್ ಪಕ್ಕದ ಅಂಗಡಿಯಾತ ನೀಡಿದ ಸಲಹೆಯಂತೆ ಹತ್ತಿರದ ಕೊರಗಜ್ಜ ಸನ್ನಿಧಿಗೆ ಭೇಟಿಯಿತ್ತು ಹರಕೆ ಹೇಳಿಕೊಂಡಾದ ಬಳಿಕ 15 ದಿವಸದಲ್ಲಿ ಕಳಕೊಂಡ ವಾಹನ ಗೋವಾದಲ್ಲಿ ಪತ್ತೆಯಾದ ಬಗ್ಗೆ ಪೋಲೀಸರು ಮಾಹಿತಿ ನೀಡುತ್ತಾರೆ. ಇದರಿಂದ ಸಂತಸಗೊಂಡ ಆ ವ್ಯಕ್ತಿ ನನಗೆ ದೈವ ಕೈ ಬಿಡ್ಲಿಲ್ಲ ಎಂಬ ಖುಷಿಯಿಂದ ದೈವಸ್ಥಾನಕ್ಕೆ ಭೇಟಿ ಕೊಟ್ಟು ಹೇಳಿದ ಹರಕೆಯನ್ನು ಒಪ್ಪಿಸುತ್ತಾರೆ. ಮುಂದೆ ದಿನನಿತ್ಯ ದೈವಸ್ಥಾನಕ್ಕೆ ಸಂಜೆ 5ಗಂಟೆಗೆ
ಬಂದು ದೈವ ಸನ್ನಿಧಿಯ ಸ್ವಚ್ಛತೆಯನ್ನು ಮಾಡುತ್ತಾರೆ. ಇದರಿಂದ ನೆಮ್ಮದಿ ಕೂಡ ಸಿಗುತ್ತದೆ ಎನ್ನುತ್ತಾರೆ.
ಪ್ರವೀಣ್ ಸೇರಿಗಾರ್ ರ ಇಷ್ಟಾರ್ಥ ಪೂರೈಸಿದ ಕ್ಷೇತ್ರವೇ ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ಅನಂತೇಶ್ವರ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಉಡುಪಿ ತೆಂಕು ಪೇಟೆ ವುಡ್ ಲ್ಯಾಂಡ್ ಹೋಟೆಲ್ ಹತ್ತಿರದ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನವಾಗಿದೆ. ಅಷ್ಟ ಮಠಗಳಿಗೂ ಈ ದೈವಸ್ಥಾನಕ್ಕೆ ನಿಕಟ ಸಂಬಂಧವಿದೆ. ವರ್ಷದಲ್ಲಿ 12 ಸಂಕ್ರಮಣ ಪೂಜೆ, ಎರಡು ಮಾರಿಪೂಜೆ,
ಕಾಲಾವಧಿ ಮೂರು ದಿವಸ ನೇಮೋತ್ಸವ ಹಾಗೂ ಭಕ್ತರ ಹರಕೆಯ ದರ್ಶನ ಸೇವೆ ಕೋಲಸೇವೆ ಜರಗುತ್ತದೆ.
ಪ್ರತಿ ತಿಂಗಳು ಸಂಕ್ರಮಣ ದಿವಸ ವಿಶೇಷ ಪೂಜೆ ಬೆಳಿಗ್ಗೆ 8:30 ರಿಂದ ಆರಂಭಗೊಂಡು ಮಧ್ಯಾಹ್ನ 2 ಗಂಟೆವರೆಗೆ ದೈವಸ್ಥಾನ ತೆರೆದಿರುತ್ತದೆ ಈ ಸಂದರ್ಭದಲ್ಲಿ ಊರ ಪರ ಊರ ಭಕ್ತಾದಿಗಳು ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗುತ್ತಾರೆ.