ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜೂನ್ 25 ರಂದು ಕಾಪು ಮಾರಿಯಮ್ಮನ ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಿಸಲು ಸ್ವರ್ಣ ಸಂಕಲ್ಪ

Posted On: 14-06-2024 07:26AM

ಕಾಪು : ಇಲ್ಲಿ ನೆಲೆ ನಿಂತಿರುವ ಶ್ರೀ ಮಾರಿಯಮ್ಮ ದೇವಿಯು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದು ಜಗತ್ತಿನಾದ್ಯಂತ ನೆಲೆಸಿರುವ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದ್ದಾಳೆ. ಇದೀಗ ಕಾಪು ಹೊಸ ಮಾರಿಗುಡಿ ದೇವಸ್ಥಾನವು ಭಕ್ತರ ಮತ್ತು ಅಭಿವೃದ್ಧಿ ಸಮಿತಿಯ ಆಶಯದಂತೆ ಧಾರ್ಮಿಕ ಆಕರ್ಷಕ ಶ್ರದ್ಧಾ ಕೇಂದ್ರವಾಗಿ ನವ ನಿರ್ಮಾಣಗೊಳ್ಳುತ್ತಿದೆ. ನೂತನ ದೇಗುಲದಲ್ಲಿ 2025 ರ ಮಾರ್ಚ್ 2 ರಂದು ಅಮ್ಮನ ದಿವ್ಯ ಗದ್ದುಗೆಯು ಪ್ರತಿಷ್ಠಾಪನೆಗೊಳ್ಳಲಿದ್ದು, ತದನಂತರ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ. ಅಮ್ಮನ ಗದ್ದುಗೆ ಮತ್ತು ಉಚ್ಚಂಗಿ ದೇವಿಯ ಪೀಠ ಸ್ವರ್ಣಮಯವಾಗಬೇಕೆಂಬ ಆಶಯದಿಂದ ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಅಭಿವೃದ್ಧಿ ಸಮಿತಿ ‌ಅಧ್ಯಕ್ಷ ವಾಸುದೇವ ಶೆಟ್ಟಿ ಹೇಳಿದರು. ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಳದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳ ಜೊತೆಗೂಡಿ ಸ್ವರ್ಣ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.

ಭಕ್ತರು ಹೊಸ ಚಿನ್ನದೊಂದಿಗೆ ಉಪಯೋಗಿಸಿದ ಚಿನ್ನದ ಆಭರಣವನ್ನು ಹರಕೆಯ ರೂಪದಲ್ಲಿ ಸಮರ್ಪಿಸುತ್ತಿದ್ದು ಇದಕ್ಕಾಗಿ ಅಮ್ಮನಲ್ಲಿ ನುಡಿಯನ್ನು ಕೇಳಿದಾಗ ಸಂತೋಷದಿಂದ ಸ್ವೀಕರಿಸಿ ಸ್ವರ್ಣ ನೀಡಿದ ಭಕ್ತರ ಕಷ್ಟಕಾರ್ಪಣ್ಯಗಳನ್ನು ನನ್ನ ಕಾಲಬುಡಕ್ಕೆ ಹಾಕಿಕೊಳ್ಳುತ್ತೇನೆ ಎಂಬುವುದಾಗಿ ನುಡಿಯಾಗಿದೆ. ಜೂನ್ 25 ರಂದು ಬೆಳಿಗ್ಗೆ ಗಂಟೆ 09:09 ಕ್ಕೆ ಸರಿಯಾಗಿ ದೇವಳದಲ್ಲಿ ಸ್ವರ್ಣಗೌರಿ ಪೂಜೆ ಮತ್ತು ಸ್ವರ್ಣ ಸಮರ್ಪಿಸುವ ಭಕ್ತಾದಿಗಳಿಗೆ ಸ್ವರ್ಣ ಸಂಕಲ್ಪವನ್ನು ಹಮ್ಮಿಕೊಳ್ಳಲಾಗಿದೆ. ನಂತರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸ್ವರ್ಣ ಗದ್ದುಗೆ ಮಾದರಿ ಅನಾವರಣಗೊಳ್ಳಲಿದೆ ಎಂದರು.

ಸ್ವರ್ಣ ಸಮರ್ಪಣಾ ಸಮಾರಂಭ ಮತ್ತು ಸನ್ನಿಧಾನದಲ್ಲಿ ಹೊರತುಪಡಿಸಿ ಬೇರೆ ಎಲ್ಲಿಯೂ ಸ್ವರ್ಣವನ್ನು ಪಡೆದುಕೊಳ್ಳಲಾಗುವುದಿಲ್ಲ. ಸ್ವರ್ಣ ಸಂಕಲ್ಪದಲ್ಲಿ ಭಾಗವಹಿಸುವ ಭಕ್ತರು ಮುಂಗಡವಾಗಿ ತಮ್ಮ ಹೆಸರನ್ನು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿಯಲ್ಲಿ ನೋಂದಾಯಿಸಬೇಕು. ನಿಗದಿತ ಸ್ವರ್ಣ ಸಮರ್ಪಿಸಿದ ಭಕ್ತಾದಿಗಳಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಈ ಪುಣ್ಯ ಅವಕಾಶವನ್ನು ಭಕ್ತರೆಲ್ಲರೂ ಸದುಪಯೋಗಪಡಿಸಿಕೊಂಡು ಸ್ವರ್ಣ ಸಮರ್ಪಣಾ ಸಮಾರಂಭದಲ್ಲಿ ಅಥವಾ ಸನ್ನಿಧಾನದಲ್ಲಿ ಸ್ವರ್ಣ ಸಮರ್ಪಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು.

ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯಾಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾರ್ಯಾಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಸನ್ನ ಆಚಾರ್ಯ (ದೇವಿ ಜುವೆಲ್ಲರ್ಸ್ ಕಾಪು), ಕಾರ್ಯದರ್ಶಿ ರವಿ ಭಟ್ ಮಂದಾರ, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕ ಜಯರಾಮ್ ಆಚಾರ್ಯ, ಸಂದೀಪ್ ಕುಮಾರ್ ಉಪಸ್ಥಿತರಿದ್ದರು.