ಪಡುಬಿದ್ರಿ : ಕೆಳಗಿನ ಪೇಟೆ ಕೋಳಿ ಅಂಗಡಿಯಲ್ಲಿ ಕಳ್ಳತನ
Posted On:
16-06-2024 12:00PM
ಪಡುಬಿದ್ರಿ : ಇಲ್ಲಿನ ಕೆಳಗಿನಪೇಟೆಯ ರಾ.ಹೆ 66ರ
ಪಕ್ಕದಲ್ಲಿರುವ ಕೋಳಿ ಅಂಗಡಿಯೊಂದಕ್ಕೆ ಕಳ್ಳನೊಬ್ಬ ಒಳ ನುಸುಳಿ ಸಾವಿರಾರು ರೂಪಾಯಿ ಕಳ್ಳತನ ಮಾಡಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಶನಿವಾರ ವೇಳೆ ಅಂಗಡಿಯ ಹಿಂಭಾಗದಲ್ಲಿರುವ ಕೋಳಿ ಶೇಖರಣಾ ಕೊಠಡಿಯ ಎಕ್ಸಾಸ್ಟ್ ಫ್ಯಾನ್ ನ ರಂಧ್ರದೊಳಗಿಂದ ಒಳ ನುಸುಳಿರುವ ಕಳ್ಳ ಕ್ಯಾಶ್ ಕೌಂಟರ್ ನಲ್ಲಿ ಇರಿಸಲಾಗಿದ್ದ ಸಾವಿರಾರು ರೂಪಾಯಿಗಳನ್ನು ಎಗರಿಸಿದ್ದಾನೆ. ಅಂಗಡಿಯ ಎಕ್ಸಾಸ್ಟ್ ಫ್ಯಾನ್ ದುರಸ್ತಿಗೆಂದು ಕೊಡಲಾಗಿದ್ದು ಅದರ ಜಾಗದಲ್ಲಿ ರಂಧ್ರವಿದ್ದು ಮುಚ್ಚಲಾಗಿರಲಿಲ್ಲ.
ಅಂಗಡಿಯ ಒಳ ನುಸುಳಿರುವ ಕಳ್ಳ ನೇರ ಕ್ಯಾಶ್ ಕೌಂಟರ್ ಗೆ ಬಂದಿದ್ದಾನೆ. ಅಲ್ಲೇ ಇರಿಸಲಾಗಿದ್ದ ಸಿಸಿಟಿವಿಯನ್ನು ತಿರುಗಿಸಿ ಅದರ ದಿಕ್ಕು ಬದಲಿಸಿದ್ದಾನೆ. ಈ ವೇಳೆ ಸಿಸಿಟಿವಿಯಲ್ಲಿ ಆತನ ಮುಖ ಸೆರೆಯಾಗಿದ್ದು ಕಳ್ಳನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಕಾರಿಯಾಗಲಿದೆ.
ಇದೇ ಅಂಗಡಿಯಲ್ಲಿ ಈ ಮುನ್ನ ಎರಡು ಬಾರಿ ಕಳ್ಳತನ ಗೈಯ್ಯಲಾಗಿದ್ದು ಇದೀಗ ಮೂರನೇ ಬಾರಿ ಕಳ್ಳರು ಕನ್ನ ಹೊಡೆದಿದ್ದಾರೆ. ಸಿಸಿಟಿವಿ ಇರುವ ಬಗ್ಗೆ
ತಿಳಿದಿದ್ದರೂ ಕಳ್ಳರು ಯಾವುದೇ ಭಯವಿಲ್ಲದೆ
ಕಳ್ಳತನ ನಡೆಸಿದ್ದಾರೆ.