ರಂಗ ಸಂಸಾರ ಪಣಿಯೂರು : ತುಳು ಜಾನಪದ ಕಥಾಹಂದರದ ಎರಡು ನಾಟಕಗಳ ಮುಹೂರ್ತ
Posted On:
16-06-2024 04:11PM
ಕುಂಜೂರು : ರಂಗ ಸಂಸಾರ ಪಣಿಯೂರು ತಂಡದ ಈ ವರ್ಷದ ಎರಡು ವಿಭಿನ್ನ ತುಳು ಜಾನಪದ ನಾಟಕಗಳಾದ ಮೈಮೆದ ಬಾಲೆಲು ಕೋಟಿ ಚೆನ್ನಯೆರ್ ಮತ್ತು ಮಾಯಕಾರೆ ಬಬ್ಬುನ ಮಾಯದ ನಡಕೆ ರವಿವಾರ ಕುಂಜೂರು ದುರ್ಗಾ ದೇವಿ ದೇವಳದಲ್ಲಿ ಮುಹೂರ್ತಗೊಂಡಿತು.
ಬಳಿಕ ಕುಂಜೂರು ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಶಿಕ್ಷಕ ಸುದರ್ಶನ್ ರವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಲಾವಿದರ ಕಷ್ಟ, ಕಲಾವಿದರಾಗಿ ಬೆಳೆಯುವ ಹುಮ್ಮಸ್ಸು, ಕಲಾವಿದನಾಗಿ ರೂಪುಗೊಂಡ ಬಳಿಕ ಇರುವುದಿಲ್ಲ. ಪೌರಾಣಿಕ ನಾಟಕಗಳು ನಿತ್ಯ ಸತ್ಯ. ನಿರೀಕ್ಷೆಗಿಂತ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ನಾಟಕ ರಚನೆಕಾರ, ದಿಗ್ಧರ್ಶಕ ರವಿಕುಮಾರ್ ಕಡೆಕಾರು ಮಾತನಾಡಿ, ನಾಟಕ ತಂಡಗಳ ಉಳಿವು ಕಥೆ, ಕಲಾವಿದರ ಬದ್ಧತೆಯ ಮೇಲೆ ನಿಂತಿದೆ. ಉತ್ತಮ ಕಥಾ ಹಂದರವಿದ್ದಾಗ ನಾಟಕ ಗೆಲ್ಲುತ್ತದೆ. ಕಥೆಯ ಹೊರತು ಲಾಭ ಉದ್ದೇಶವಾಗಬಾರದು. ಅದರಲ್ಲೂ ಪೌರಾಣಿಕ ನಾಟಕಗಳು ಸುಲಭ ಸಾಧ್ಯವಲ್ಲ ಎಂದರು
ಕಾಂತಾರ ಚಲನಚಿತ್ರ ಖ್ಯಾತಿಯ ಚಂದ್ರಕಲಾ ಮಾತನಾಡಿ ಮಕ್ಕಳಿಗೆ ದೈವ ದೇವರ ಕಾರ್ಣಿಕದ ಹಿರಿಮೆ ತಿಳಿ ಹೇಳುವ ನಾಟಕಗಳು ಮೂಡಿ ಬರಬೇಕಾಗಿದೆ. ಆ ಮೂಲಕ ಸಂಸ್ಕೃತಿಯ ಜೊತೆ ಕಲೆ ಉಳಿಯಲು ಸಾಧ್ಯ ಎಂದರು.
ಈ ಸಂದರ್ಭ ಹಿರಿಯರಾದ ಯಶೋಧರ ಶೆಟ್ಟಿ ನಾಟಕ ತಂಡಕ್ಕೆ ಶುಭ ಹಾರೈಸಿ, ನಾಟಕದ ಪ್ರತಿಯನ್ನು ತಂಡಕ್ಕೆ ಹಸ್ತಾಂತರಿಸಿದರು.
ನಾರಾಯಣ ಶೆಟ್ಟಿ ಅದಮಾರು, ರಂಗಕರ್ಮಿ ಗುರು ಚರಣ್ ಪೊಲಿಪು, ನವೀನ್ ಕುಮಾರ್, ನಾಟಕ ಕಲಾವಿದ ಸುಜಿತ್ ಶೆಟ್ಟಿ, ಗಣೇಶ್ ಪಣಿಯೂರು, ವಿವಿಧ ನಾಟಕ ತಂಡಗಳ ಕಲಾವಿದರು ಉಪಸ್ಥಿತರಿದ್ದರು.
ನಾಟಕದ ನಿರ್ದೇಶಕ ಆನಂದ ಕುಂದರ್ ಸ್ವಾಗತಿಸಿ, ವಂದಿಸಿದರು. ರಾಜೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.