ಜೂ. 29 - 30 : ಕಾಪುವಿನಲ್ಲಿ ಪ್ರಥಮ ರಾಷ್ಟ್ರ ಮಟ್ಟದ ಒಪನ್ ಫಿಡೇ ರೇಟೆಡ್ ರ್‍ಯಾಪಿಡ್ ಚೆಸ್ ಸ್ಪರ್ಧೆ
Posted On:
18-06-2024 05:53PM
ಕಾಪು : ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಮತ್ತು ಉಡುಪಿ ಇವರ ವತಿಯಿಂದ ಜೂ. 29 ಮತ್ತು 30 ರಂದು ಕಾಪು ಶ್ರೀ ಹಳೆ ಮಾರಿಯಮ್ಮ ಸಭಾಭವನದಲ್ಲಿ ಕಾಪುವಿನಲ್ಲಿ ಪ್ರಥಮ ರಾಷ್ಟ್ರ ಮಟ್ಟದ ಒಪನ್ ಫಿಡೇ ರೇಟೆಡ್ ರ್‍ಯಾಪಿಡ್ ಚೆಸ್ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆಯ ಸ್ಥಾಪಕ ಸಾಕ್ಷಾತ್ ಯು.ಕೆ. ತಿಳಿಸಿದರು.
ಅವರು ಮಂಗಳವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ಸಹಿತ ವಿವಿಧ ರಾಜ್ಯಗಳ 300ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧಾಳುಗಳು ಮತ್ತು ಅವರೊಂದಿಗೆ ಬರುವ ಪೋಷಕರಿಗೆ 2 ದಿನದ ಉಚಿತ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.
ಎಫಿಲೆನ್ಸ್ ಟೆಕ್ನಾಲಜೀಸ್ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಮಂಗಳೂರು, ಯುಡಿಸಿಎ ಉಡುಪಿ, ಕೆಎಸ್‌ಸಿಎ, ಎಐಸಿಎಸ್ ಫಿಡೆಗಳ ಸಹಕಾರದೊಂದಿಗೆ ನಡೆಯುವ ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಎರಡು ಲಕ್ಷ ರೂ. ವರೆಗೆ ನಗದು ಬಹುಮಾನ ನೀಡಲಾಗುವುದು.
6,8,10,12,14,16, ವರ್ಷ ಪ್ರಾಯದ ಹುಡುಗರು ಮತ್ತು ಹುಡುಗಿಯರಿಗಾಗಿ ನಡೆಯುವ ಸ್ಪರ್ಧೆಯಲ್ಲಿ ಪ್ರತೀ ವಿಭಾಗದಲ್ಲಿ ತಲಾ 10 ರಂತೆ 120 ಟ್ರೋಫಿ, ಓಪನ್‌ನಲ್ಲಿ 20, ಇತರ ವಿಭಾಗದಲ್ಲಿ 47 ಟ್ರೋಫಿ ಸಹಿತ 187 ಟ್ರೋಫಿ ವಿತರಿಸಲಾಗುವುದು ಎಂದರು.
ಜೂ. 29 ರಂದು ಬೆಳಿಗ್ಗೆ 8.45ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪಂದ್ಯಾಟವನ್ನು ಉದ್ಘಾಟಿಸಲಿದ್ದು, ಎಫಿಲೆನ್ಸ್ ಟೆಕ್ನಾಲಜೀಸ್ ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿ ಮಂಗಳೂರು ಇದರ ಸ್ಥಾಪಕ ಅವಿನಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ತಹಶೀಲ್ದಾರ್ ಡಾ| ಪ್ರತಿಭಾ ಆರ್., ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಸಹಿತ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜೂ. 30 ರಂದು ಸಂಜೆ 4.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಮತ್ತು ಉಡುಪಿ ಇದರ ಅಧ್ಯಕ್ಷ ಉಮಾನಾಥ್ ಕಾಪು, ನಿರ್ದೇಶಕಿ ಸೌಂದರ್ಯ ಯು.ಕೆ., ಮುಖ್ಯ ಸಲಹೆಗಾರ ಲಕ್ಷ್ಮೀನಾರಾಯಣ ಆಚಾರ್ಯ ಉಡುಪಿ, ಸಲಹೆಗಾರ ನಾಗೇಶ್ ಕಾರಂತ್ ಕಾಪು, ಪಾಂಗಾಳ ಆಸರೆ ಸಂಸ್ಥೆಯ ಸ್ಥಾಪಕ ಪೆನ್ವಿಲ್ ಸೋನ್ಸ್, ಲೋಕೇಶ್ ಕೊಡ್ಮಾಣ್ ಉಪಸ್ಥಿತರಿದ್ದರು.