ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ದಂಡತೀರ್ಥ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

Posted On: 18-06-2024 06:51PM

ಕಾಪು : ಇಲ್ಲಿನ ಉಳಿಯಾರಗೋಳಿ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಂಸತ್ತನ್ನು ಪೊಲಿಪು ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಸುಧಾಕರ್ ಎಮ್. ಎ. ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶಾಲಾ ಜೀವನದಿಂದಲೇ ವಿದ್ಯಾರ್ಥಿಗಳಿಗೆ ಸಂಸತ್ತಿನ ಅರಿವು ಮೂಡಿಸಿ, ಆಡಳಿತಾತ್ಮಕ ವಿಚಾರಗಳನ್ನು ತಿಳಿಸಿದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬಲಯುತರಾಗುತ್ತಾರೆ ಹಾಗೂ ಸಮಾಜಕ್ಕೆ ಒಳ್ಳೆಯ ಆಡಳಿತವನ್ನು ನೀಡಲು ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ನೀಡಿದರು.

ಉಪನ್ಯಾಸಕರಾದ ಸುಧಾಕರ್ ಎಮ್. ಎ. ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ವಿದ್ಯಾರ್ಥಿಗಳಾದ ಮಫಾಝ್, ಧನುಷ್, ಅನಿಷಾ, ಶಮಿಕ್ ಆಳ್ವ ವಿವಿಧ ಮಂತ್ರಿಗಳಾಗಿ ತಮ್ಮ ಕಾರ್ಯಭಾರವನ್ನು ವಹಿಸಿಕೊಂಡರು. ಮುಯಿಝಾ ಬಾನು ಸ್ಪೀಕರ್ ಆಗಿ ಆಯ್ಕೆಯಾದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದಂಡತೀರ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ನೀಲಾನಂದ್ ನಾಯ್ಕ್, ವಿದ್ಯಾರ್ಥಿಗಳು ಶಿಸ್ತಿನಿಂದ ಶಿಕ್ಷಣ ಪಡೆದು, ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರತಿಭಾವಂತರಾಗಿ ಮೂಡಿಬರಬೇಕು. ಸ್ವೀಕರಿಸಿದ ಪ್ರತಿಜ್ಞೆಗನುಸಾರವಾಗಿ ಶಾಲೆಯ ಶಿಸ್ತನ್ನು ಕಾಪಾಡಬೇಕೆಂಬ ಕಿವಿಮಾತನ್ನು ಹೇಳಿದರು.

ವೇದಿಕೆಯಲ್ಲಿ ಶೈಕ್ಷಣಿಕ ಸಂಯೋಜಕ ಶಿವಣ್ಣ ಬಾಯಾರ್, ಶಾಲಾ ಸಂಸತ್ತಿನ ಮಾರ್ಗದರ್ಶಕಿ ಶೋಭಾ, ವಿರೋಧ ಪಕ್ಷದ ನಾಯಕ ಸಿದ್ಧಾರ್ಥ್ ಶೆಟ್ಟಿ, ಉಪನಾಯಕ ಜೆಶಿತ್ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು. ಶಾಲಾ ನಾಯಕ ಸುಮಿತ್ ಸ್ವಾಗತಿಸಿದರು. ಯಶಿಕಾ ವಂದಿಸಿದರು.