ಹೆದ್ದಾರಿಯಲ್ಲಿ ಬಸ್ ಹಿಂಬದಿಗೆ ಕಾರು ಢಿಕ್ಕಿ ; ಮಹಿಳೆಗೆ ಗಾಯ
Posted On:
21-06-2024 08:55PM
ಪಡುಬಿದ್ರಿ : ಪ್ರಯಾಣಿಕರನ್ನು ಹತ್ತಿಸಲು ನಿಲ್ಲಿಸಿದ್ದ ಸರ್ವಿಸ್ ಬಸ್ ಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಸರ್ವಿಸ್ ಬಸ್ ಪ್ರಯಾಣಿಕರನ್ನು ಹತ್ತಿಸಲು ಹೆದ್ದಾರಿಯಲ್ಲಿ ಹಠಾತ್ತ್ ನಿಲ್ಲಿಸಿದ್ದರಿಂದ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ಬಸ್ ನ ಹಿಂಬದಿಗೆ ಗುದ್ದಿದೆ.
ಘಟನೆಯಲ್ಲಿ ಕಾರಿನಲ್ಲಿ ಚಾಲಕನ ಪಕ್ಕದಲ್ಲಿದ್ದ ಮಹಿಳೆ ಮಂಗಳೂರು ನಿವಾಸಿ ಪುಷ್ಪಲತಾ ಆಚಾರ್ಯರಿಗೆ ಮುಖ, ಕೈ, ಕಾಲುಗಳಿಗೆ ಗಾಯವಾಗಿದ್ದು ತಕ್ಷಣ ಪಡುಬಿದ್ರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ
ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದಂತೆ ಮಹಿಳೆಯರು ಕಾರಲ್ಲಿ ಇದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ.
ಸರ್ವಿಸ್ ರಸ್ತೆಗೆ ಇಳಿಯದ ಕೆಲವು ಬಸ್ಸುಗಳು : ಅಗಲ ಕಿರಿದಾದ ರಾಷ್ಟ್ರೀಯ ಹೆದ್ದಾರಿ, ಸರ್ವಿಸ್ ರಸ್ತೆಗಳಿಂದಾಗಿ ಜನರಿಗೆ ತೊಂದರೆಯಾಗಿದೆ. ಉಡುಪಿ ಕಡೆಗೆ ಸಾಗುವ ಬಸ್ ಗಳ ತಂಗುದಾಣ ಸರ್ವಿಸ್ ರಸ್ತೆಯಲ್ಲಿದ್ದರೂ ಕೆಲವೊಂದು ಬಸ್ ಗಳು ಸರ್ವಿಸ್ ರಸ್ತೆಗೆ ಬಾರದೆ ರಾಷ್ಟ್ರೀಯ ಹೆದ್ದಾರಿಯಲ್ಲೇ ನಿಲ್ಲುತ್ತಿದೆ. ಬಸ್ ಬಂದ ತಕ್ಷಣ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನ ಗಮನಿಸದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲುವ ಬಸ್ ಗಳೆಡೆ ಸಾಗುವ ಭರದಲ್ಲಿ ಸರ್ವಿಸ್ ರಸ್ತೆಯಲ್ಲಿ ಸಾಗುವ ವಾಹನ ಸವಾರರಿಗೂ ಇದು ಸವಾಲಾಗಿದೆ. ಇದು ಅಪಘಾತಗಳಿಗೆ ಎಡೆ ಮಾಡಿದಂತಿದೆ.
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.