ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ಶ್ರೀ ಹೊಸ ಮಾರಿಗುಡಿ ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆಗೆ ಚಾಲನೆ

Posted On: 25-06-2024 07:35PM

ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಭಕ್ತರ ಮತ್ತು ಅಭಿವೃದ್ಧಿ ಸಮಿತಿಯ ಆಶಯದಂತೆ ಧಾರ್ಮಿಕ ಆಕರ್ಷಕ ಶ್ರದ್ಧಾ ಕೇಂದ್ರವಾಗಿ ನವ ನಿರ್ಮಾಣಗೊಳ್ಳುತ್ತಿದ್ದು, ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಅಮ್ಮನ ಗದ್ದುಗೆ ಮತ್ತು ಉಚ್ಚಂಗಿ ದೇವಿಯ ಸ?ಸ್ವರ್ಣ ಗದ್ದುಗೆ ಸಮರ್ಪಣೆಯ ಸಂಕಲ್ಪಕ್ಕೆ ಸ್ವರ್ಣ ಗೌರಿ ಪೂಜೆ ಮತ್ತು ಸ್ವರ್ಣ ಸಮರ್ಪಣಾ ಸಮಾರಂಭ ಮಂಗಳವಾರ ಜರಗಿತು.

ಮುಂಬೈ ಹೇರಂಭ ಸಂಸ್ಥೆಯ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ದೇವಿಯ ಆರಾಧಕರಿಗೆ ಸುವರ್ಣಾವಕಾಶ ಒದಗಿ ಬಂದಿದ್ದು, ಕಾಪುವಿನ ಮಾರಿಯಮ್ಮ ದೇವಿಯನ್ನು ಸುವರ್ಣ ಗದ್ದುಗೆಯಲ್ಲಿ ನೋಡುವಲ್ಲಿ ಎಲ್ಲರಿಗೂ ಕೈ ಜೋಡಿಸುವ ಭಾಗ್ಯ. ತಂದೆ ತಾಯಿ ಕೊಟ್ಟ ಸಂಸ್ಕಾರ, ಸತತ ಪರಿಶ್ರಮ, ಧರ್ಮ ಕಾರ್ಯದ ಮೂಲಕ ದೈವೀ ಶಕ್ತಿಯು ಜಾಗೃತಗೊಳ್ಳಲಿದೆ. ಆ ನಿಟ್ಟಿನಲ್ಲಿ ಇತಿಹಾಸ ನಿರ್ಮಾಣದ ಕಾರ್ಯದಲ್ಲಿ ಎಲ್ಲರೂ ಶ್ರದ್ಧಾ ಭಕ್ತಿಯಿಂದ ಕೈ ಜೋಡಿಸುವ ಮೂಲಕ ಕರಾವಳಿಯ ಶ್ರೇಷ್ಠ ಶ್ರದ್ಧಾ ಕೇಂದ್ರವಾಗಿ ಮೂಡಿ ಬರಲಿ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಅಮ್ಮನ ನುಡಿಯಂತೆ ಸ್ವರ್ಣ ಗದ್ದುಗೆ ಸಮರ್ಪಣೆಗೆ ಮುಂದಾಗಿದ್ದು, ಶ್ರೀ ಕ್ಷೇತ್ರಕ್ಕೆ ಶಕ್ತಿ, ಚೈತನ್ಯವನ್ನು ತುಂಬುವಲ್ಲಿ ಸ್ವರ್ಣ ಗದ್ದುಗೆ ನಿರ್ಮಾಣದ ಸಂದರ್ಭ ಇಲ್ಲಿ ಬರುವ ಬಂಗಾರದ ಮಳೆಯು ಎಲ್ಲರ ಬದುಕಿಗೂ ಸ್ವರ್ಣ ಯುಗವಾಗಲಿ. ಈ ಪುಣ್ಯ ಅವಕಾಶವನ್ನು ಭಕ್ತರೆಲ್ಲರೂ ಸದುಪಯೋಗಪಡಿಸಿಕೊಂಡು ಸನ್ನಿಧಾನದಲ್ಲಿ ಸ್ವರ್ಣ ಸಮರ್ಪಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು. ವಿ.ಕೆ. ಗ್ರೂಪ್ ಆಫ್ ಕಂಪೆನಿ ಮುಂಬಯಿಯ ಆಡಳಿತ ನಿರ್ದೇಶಕ ಕೆ.ಎಮ್. ಶೆಟ್ಟಿ ಅವರು ಸ್ವರ್ಣ ಗದ್ದುಗೆ ಮಾದರಿಯನ್ನು ಅನಾವರಣ ಗೊಳಿಸಿದರು. ಮಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎಂಆರ್‌ಜಿ ಗ್ರೂಪ್ ಬೆಂಗಳೂರು ಇದರ ಆಡಳಿತ ನಿರ್ದೇಶಕ ಡಾ|ಕೆ. ಪ್ರಕಾಶ್ ಶೆಟ್ಟಿ, ಆಶಾ ಪ್ರಕಾಶ್ ಶೆಟ್ಟಿ ದಂಪತಿಯನ್ನು ಸಮ್ಮಾನಿಸಿ ಗೌರವಿಸಲಾಯಿತು.

ಸುಮಾರು ೩.೮೨ ಕೋಟಿ ರೂ. ವೆಚ್ಚದ ಅದಾನಿ ನಿರ್ಮಲ್ ಸೆಂಟರ್ ಕಟ್ಟಡವನ್ನು ನಿರ್ಮಿಸಿ ಕೊಡುವಂತೆ ಅದಾನಿ ಸಮೂಹದ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಅವರಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುಂಬಯಿ ತುಂಗಾ ಗ್ರೂಪ್ ಆಫ್ ಹೋಟೆಲ್‌ನ ಆಡಳಿತ ನಿರ್ದೇಶಕ ಸುಧಾಕರ್ ಹೆಗ್ಡೆ, ಮುಂಬಯಿ ಈಸ್ಟ್ವೆಲ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಭಾಕರ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ತಾಲೂಕು ತಹಶೀಲ್ದಾರ್ ಪ್ರತಿಭಾ ಆರ್. ಈ ಪುಣ್ಯ ಕಾರ್ಯದಲ್ಲಿ ಭಕ್ತರೆಲ್ಲರೂ ಕೈ ಜೋಡಿಸುವಂತೆ ವಿನಂತಿಸಿದರು. ಈ ಸಂದರ್ಭ ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಮಹೇಶ್ ಕೋಟ್ಯಾನ್, ಮುಂಬಯಿ ಉದ್ಯಮಿ ಮಾನವ್ ಶಂಕರ್ ಜೋಶಿ, ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಸುವರ್ಣ, ಹೊಸಮಾರಿಗುಡಿ ಜೀರ್ಣೋದ್ಧಾರ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ  ಸರ್ವೋತ್ತಮ ಶೆಟ್ಟಿ, ಮಾರಿಗುಡಿಯ ಆಡಳಿತ ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಅಧ್ಯಕ್ಷ ರವಿ ಸುಂದರ್ ಶೆಟ್ಟಿ, ಪ್ರಮುಖರಾದ ಚಂದ್ರಹಾಸ ಶೆಟ್ಟಿ ಪೂನಾ, ಕೃಷ್ಣ ಶೆಟ್ಟಿ, ಶಿವಾನಂದ ಶೆಟ್ಟಿ, ಸಂತೋಷ್ ಶೆಟ್ಟಿ ಪೂನಾ, ದಿವಾಕರ ಶೆಟ್ಟಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಾರ್ಯಾಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಸನ್ನ ಆಚಾರ್ಯ ಕಾಪು, ಕಾರ್ಯದರ್ಶಿ ರವಿ ಭಟ್ ಮಂದಾರ, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಮುಖರಾದ ಯೋಗೀಶ್ ಶೆಟ್ಟಿ ಬಾಲಾಜಿ, ಜಯರಾಮ ಆಚಾರ್ಯ, ಸಂದೀಪ್, ಮಾಧವ ಆರ್ ಪಾಲನ್, ಶ್ರೀ ಹೊಸಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಶ್ರೀ ಹೊಸಮಾರಿಗುಡಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಸಿಬಂದಿ ವರ್ಗ ಉಪಸ್ಥಿತರಿದ್ದರು.

ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಪ್ರಧಾನ ಕಾರ್ಯಾಧ್ಯಕ್ಷ ಡಾ|ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ಕದ್ರಿ ನವನೀತ್ ಶೆಟ್ಟಿ ಸಮ್ಮಾನಿತರ ಅಭಿನಂದನಾ ನುಡಿಗಳನ್ನಾಡಿದರು. ಸಮಾಜ ಸೇವಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ ಕೊತ್ವಾಲಗುತ್ತು ವಂದಿಸಿದರು. ಈ ಸಂದರ್ಭ ಪ್ರಧಾನ ತಂತ್ರಿಗಳಾದ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಉಪಸ್ಥಿತಿಯಲ್ಲಿ ಅಮ್ಮನ ಸನ್ನಿಧಾನದಲ್ಲಿ ಪ್ರಾರ್ಥನೆ, ಸ್ವರ್ಣ ಗೌರಿ ಪೂಜೆ ಮತ್ತು ಸ್ವರ್ಣ ಸಂಕಲ್ಪ, ಮಹಾ ಮಂಗಳಾರತಿ, ಭಕ್ತಾಧಿಗಳಿಗೆ ಸ್ವರ್ಣ ಸಮರ್ಪಣೆಗೆ ಅವಕಾಶ, ಪ್ರಸಾದ ಭೋಜನ ನಡೆಯಿತು.