ಉಚ್ಚಿಲ : ಮಳೆಗಾಲದ ಮೀನುಗಾರಿಕೆಯ “ದಾರಾ”ಗೆ ಚಾಲನೆ
Posted On:
01-07-2024 06:16PM
ಉಚ್ಚಿಲ : ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಸುವ ಮೋಗವೀರರು ಮೀನುಗಾರಿಕೆಗಾಗಿ ಬಳಸುವ ಬಲೆಗಳನ್ನು ಜೋಡಿಸುವ ಕಾರ್ಯ "ದಾರ" ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಾಂಗಣದಲ್ಲಿ ಭಾನುವಾರ ನಡೆಯಿತು. ವರ್ಷಂಪ್ರತಿಯಂತೆ ಉಡುಪಿ ಜಿಲ್ಲೆಯ ಉಚ್ಚಿಲ ಕೇಂದ್ರವಾಗಿಟ್ಟುಕೊಂಡು ಉಚ್ಚಿಲ- ಎರ್ಮಾಳು ವಲಯದ ನಾಡದೋಣಿ ಮೀನುಗಾರರು ಭಾನುವಾರ ಸಾಂಪ್ರ‍್ರದಾಯಿಕ ನಾಡದೋಣಿ ಮೀನುಗಾರಿಕೆಗಾಗಿ "ದಾರ" ಮುಹೂರ್ತ ನಡೆಸಿದ್ದಾರೆ.
ಕಳೆದ ವರ್ಷದ ನಾಡದೋಣಿ ಮೀನುಗಾರಿಕೆ ಋತು ಕೊನೆಗೊಂಡ ಬಳಿಕ ಮೀನುಗಾರಿಕೆಗೆ ಬಳಸಿದ ಮಾಟುಬಲೆಯನ್ನು ಬಿಡಿ ಬಿಡಿಯಾಗಿಸಿ ಸಂಗ್ರಹಿಸಿಡುತ್ತಾರೆ. ಹರಿದ ಬಲೆಗಳನ್ನು ಸರಿಪಡಿಸುವ ಉದ್ದೇಶದಿಂದ ಮೀನುಗಾರ ಪ್ರತಿನಿಧಿಗಳಿಗೆ ಹಂಚುತ್ತಾರೆ. ಅವರೆಲ್ಲರೂ ಅದನ್ನು ಡಿಸೆಂಬರ್ 15 ರೊಳಗೆ ಫಂಡಿನ ಮುಖ್ಯಸ್ಥರಿಗೆ ತಲುಪಿಸಬೇಕು. ಆಯಕಟ್ಟಿನ ಜಾಗದಲ್ಲಿ ಬಿಡಿಬಿಡಿಯಾಗಿ ಜೋಡಿಸಿಟ್ಟ ಬಲೆಗಳನ್ನು ಮಳೆಗಾಲ ಆರಂಭಗೊಂಡ ಬಳಿಕ ಸಾಮೂಹಿಕವಾಗಿ ನಿಗದಿ ಪಡಿಸಿದ ದಿನದಂದು ಎಲ್ಲರೂ ಒಗ್ಗಾಟ್ಟಾಗಿ ಪೋಣಿಸುವ ಕೈಂಕರ್ಯವೇ “ದಾರ”. ಮಳೆಗಾಲ ಆರಂಭಗೊಂಡ ತಕ್ಷಣ ಸಮುದ್ರ ಪ್ರಕ್ಷಭ್ದ ಗೊಳ್ಳುತ್ತದೆ. ಮಧ್ಯೆ ಕೆಲವು ದಿನ ಶಾಂತವಾಗುವ ಸಂದರ್ಭ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. ಈ ಅವಕಾಶಕ್ಕಾಗಿ ಕಾದು ಕುಳಿತಿರುವ ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ಆರಂಭಿಕವಾಗಿ "ದಾರ" ನಡೆಸುತ್ತಾರೆ. ಎಲ್ಲಾ ಫಂಡಿನಿಂದ ತಲಾ 5 ಮಂದಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ಪುರೋಹಿತರ ಬಳಿ ದಾರ ಪ್ರಕ್ರಿಯೆಗಾಗಿ ಶುಭಮೂಹೂರ್ತ ಯಾಚಿಸುತ್ತಾರೆ. ಪುರೋಹಿತರು ನೀಡಿದ ಶುಭ ಮುಹೂರ್ತದಂದು ಪ್ರತಿಯೊಂದು ಫಂಡಿನವರು ಒಗ್ಗಟ್ಟಾಗಿ ದೈವ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿ ಬಲೆಗಳನ್ನು ಜೋಡಿಸುವ ಮೂಲಕ ದಾರ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ.
ದಾರ ಮುಗಿದ ಬಳಿಕ ಜೋಡಿಸಿದ ಬಲೆಗಳನ್ನು ದೋಣಿಗಳಲ್ಲಿ ತುಂಬಿಸಿ ಮತ್ತೊಂದು ಶುಭ ಮುಹೂರ್ತದಲ್ಲಿ ಬಲೆಯನ್ನು ನೀರಿಗೆ ಹಾಕುವ ಸಂಪ್ರಾದಾಯವಿದೆ. ಆ ಬಳಿಕ ಸಮುದ್ರ ಶಾಂತಗೊಂಡು ಮೀನುಗಾರಿಕಾ ಪ್ರಕ್ರಿಯೆ ಆರಂಭಗೊಂಡ ತಕ್ಷಣ ಎಲ್ಲರೂ ಒಗ್ಗಟ್ಟಾಗಿ ಗ್ರಾಮದ ಎಲ್ಲಾ ದೈವ, ದೇವಸ್ಥಾನ, ಮಂದಿರಗಳಿಗೆ ಸಾಮೂಹಿಕ ಪ್ರಾರ್ಥನೆ ನಡೆಸಿ ಉತ್ತಮ ಮತ್ಸ್ಯ ಸಂಪತ್ತು ಹಾಗೂ ಮೀನುಗಾರಿಕೆ ಸಂದರ್ಭ ಯಾವುದೇ ಅವಘಡ ನಡೆಯದಿರಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯುತ್ತಾರೆ.
ಮಳೆಗಾಲದ ಅವಧಿಯಲ್ಲಿ ಯಾವುದೇ ಯಾಂತ್ರಿಕ ದೋಣಿಗಳು ಕಡಲಿಗಿಳಿಯದು. ಹಾಗಾಗಿ ಆ ಸಂದರ್ಭ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ. ಈ ದಿನಗಳಲ್ಲಿ ಶೇ.75ರಷ್ಟು ದಿನ ಸಮುದ್ರ ಪ್ರಕ್ಷುಭ್ದ ವಾಗಿರುತ್ತದೆ. ಸಿಗುವ ಅತ್ಯಲ್ಪ 15 ರಿಂದ 20 ದಿನಗಳ ಅವಧಿಯಲ್ಲಿ ಮಾತ್ರ ಮೀನುಗಾರಿಕೆಗೆ ಅವಕಾಶ. ಆ ಸಂದರ್ಭ ನಾಡದೋಣಿಯಲ್ಲಿ ಬಹುದೂರ ಚಲಿಸುವಂತೆಯೂ ಇಲ್ಲ.
ಇರುವ ಅಲ್ಪ ಪರಿಮಿತಿಯೊಳಗೆ ಮೀನುಗಾರಿಕೆ ನಡೆಸಬೇಕು. ಈ ಅವಧಿಯಲ್ಲಿ ಬೆಳೆಬಾಳುವ ಸಿಗಡಿ ದೊರೆತರೆ ಮಾತ್ರ ಬಂಪರ್ ಲಾಟರಿ ಸಿಕ್ಕಿದಂತೆ. ಉಳಿದಂತೆ ದೊರಕುವ ಬಂಗುಡೆ, ಬೂತಾಯಿ, ಇನ್ನಿತರ ಸಣ್ಣಪುಟ್ಟ ಮೀನುಗಳು ಹೇರಳ ದೊರಕಿದರೂ ಪ್ರಯೋಜನವಿಲ್ಲ. ಕೇವಲ ಸಿಗಡಿ ಬೇಟೆಗಾಗಿ ಮೀನುಗಾರರು ಆಶಾ ಭಾವದೊಂದಿಗೆ ಕಡಲಗಿಳಿಯುತ್ತಾರೆ. ಆದರೆ ಲಾಟರಿಯಂತೆ ಎಲ್ಲರೂ ಅದೃಷ್ಟನಂತರಾಗಿರುವುದಿಲ್ಲ. 1,000 ದೋಣಿಗಳ ಪೈಕಿ 100ಕ್ಕೆ ದೊರೆತರೆ ಹೆಚ್ಚು. ಆದ್ದರಿಂದಲೇ ಮಳೆಗಾಲದ ಮೀನುಗಾರಿಕೆಯನ್ನು ಲಾಟರಿಗೆ ಹೋಲಿಸುತ್ತಾರೆ.
ಈ ವೇಳೆ ಉಚ್ಚಿಲ ಕೈ ರಂಪಣಿ ಫಂಡಿನ ಮೀನುಗಾರರಲ್ಲೋರ್ವರು ಮಾತನಾಡಿ, ಬೆಲೆ ಏರಿಕೆ, ಬಂದರು ಸೌಲಭ್ಯ ಇಲ್ಲದಿರುವುದು, ಬೃಹತ್ ಕೈಗಾರಿಕೆಗಳಿಂದ ಕಲುಷಿತ ನೀರು ಸಮುದ್ರಕ್ಕೆ ಬಿಡುತ್ತಿರುವುದು ಹಾಗೂ ಮೀನು ಸಂತತಿ ನಾಶವಾಗಿರುವುದು, ನಾಡದೋಣಿ ಮೀನುಗಾರಿಕೆಗೆ ಇತ್ತೀಚಿನ ವರ್ಷಗಳಲ್ಲಿ ಭಾರೀ ನಷ್ಟವನ್ನುಂಟು ಮಾಡುತ್ತಿವೆ.
ಬೃಹತ್ ಉದ್ದಿಮೆಗಳಿಂದ ತೀರ ಮೀನುಗಾರಿಕೆಗೆ ತೀರಾ ಸಮಸ್ಯೆ ಉಂಟಾಗಿದ್ದು, ಮೊಟ್ಟೆ ಇಡಲು ಬರುತ್ತಿರುವ ಮೀನುಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಇಲ್ಲಿ ಮೀನುಗಾರಿಕೆಗೆ ಯೋಗ್ಯ ಸ್ಥಳ ಇಲ್ಲವಾದ್ದರಿಂದ ಪ್ರತಿದಿನ ಟೆಂಪೋ ಮೂಲಕ ಮಲ್ಪೆ ಅಥವಾ ಮಂಗಳೂರು ಬಂದರಿಗೆ ಹೋಗಿ ಮೀನುಗಾರಿಕೆ ನಡೆಸಬೇಕಾಗಿದೆ. ಹಾಗಾಗಿ ದಿನ ನಿತ್ಯ ಫಂಡ್ ಒಂದಕ್ಕೆ ಸಾವಿರಾರು ರುಪಾಯಿ ಖರ್ಚು ಸಂಭವಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೆಲೆಯೇರಿಕೆಯಿಂದ ಖರ್ಚು ವೆಚ್ಚ ಜಾಸ್ತಿಯಾಗುತ್ತಿದ್ದು ಸಾಕಷ್ಟು ಸಂಪಾದನೆ ಆಗುತ್ತಿಲ್ಲ. ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಉಳಿಯ ಬೇಕಾದರೆ, ಜತೆಗೆ ಬಡ ಮೀನುಗಾರರು ಬದುಕು ಹಸನಾಗಬೇಕಾದರೆ, ಸರಕಾರ ನಮ್ಮ ಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸ ಬೇಕು ಎನ್ನುತ್ತಾರೆ ಮೀನುಗಾರರು.
ಕ್ಯರಂಪಣಿ ಫಂಡಿನ ಮುಖ್ಯಸ್ಥ ಮೋಹನ ಗುರಿಕಾರ ಮಾತನಾಡಿ, ಉಚ್ಚಿಲದಲ್ಲಿ ಹಿಂದೆ 10ಕ್ಕಿಂತ ಹೆಚ್ಚು ಜೋಡಿಗಳಿತ್ತು. ಈಗ ಕೇವಲ ಮೂರಕ್ಕೆ ಇಳಿದಿದೆ. ಮೀನಿನ ಸಂತತಿ ನಾಶ, ಲಾಭಕ್ಕಿಂತ ನಷ್ಟವೇ ಹೆಚ್ಚು, ಯುವ ಪೀಳಿಗೆ ಮೀನುಗಾರಿಕೆಯಲ್ಲಿ ದೂರ ಸರಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಳೆಗಾಲದ ಮೀನುಗಾರಿಕೆ ನಿಲ್ಲುವ ಸಂಭವವೇ ಹೆಚ್ಚಾಗಿದೆ ಎಂದು ಹೇಳಿದ್ದಾರೆ.