ಇನ್ನಂಜೆ : ಇಲ್ಲಿನ ಗ್ರಾಮಪಂಚಾಯತ್ ವ್ಯಾಪ್ತಿಯ ಪಾಂಗಾಳ ಗ್ರಾಮದ ಬೀಡುವಿನ ಗದ್ದೆಗಳಲ್ಲಿ ಹಾಗೂ ಮನೆಯ ಅಂಗಳದಲ್ಲಿ ಕೃತಕ ನೆರೆಗೆ ಖಾಸಗಿ ಜಮೀನಿನಲ್ಲಿ ಚರಂಡಿ ಇರುವುದರಿಂದ ಸಮಸ್ಯೆ ಬಗೆಹರಿಯದಾಗಿದ್ದು ಖಾಸಗಿ ಜಾಗದವರ ಅನುಮತಿ ಇಲ್ಲದೆ ಗ್ರಾಮ ಪಂಚಾಯತ್ ಗೆ ಅವರ ಗದ್ದೆಯಲ್ಲಿ ಚರಂಡಿ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಏನೂ ಕ್ರಮ ಕೈಗೊಳ್ಳಲಿಲ್ಲ ಎಂದು ಸುದ್ದಿ ಹರಡಿದೆ. ಇದು ಸತ್ಯಕ್ಕೆ ದೂರವಾದದ್ದು. ಸುಮಾರು 5 ವರ್ಷದ ಮುಂಚೆ ಉಪಾಧ್ಯಕ್ಷೆಯಾಗಿ ಇದ್ದಾಗ ಮಳೆಗಾಲದಲ್ಲಿ ತುಂಬು ನೆರೆ ಬಂದ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಒಮ್ಮೆ ಒತ್ತಾಯ ಪೂರ್ವಕವಾಗಿ ಚರಂಡಿಗೆ ಅಡ್ಡ ಹಾಕಿದ ತಡೆಗೋಡೆಯನ್ನು ತೆಗೆದು ಹಾಕಿ ಸಮಸ್ಯೆ ಪರಿಹಾರ ಮಾಡಿದ್ದು ಈಗ ಪುನಃ ಖಾಸಗಿ ಜಾಗದವರು ಅಲ್ಲಿ ನೀರು ಹರಿಯಲು ತಡೆಗೋಡೆ ನಿರ್ಮಿಸಿದ್ದಾರೆ. ನಿರಂತರ ನಾವು ಹಲವು ರೀತಿಯಲ್ಲಿ ಪ್ರಯತ್ನ ಮಾಡಿದರೂ ಒಂದು ಮನೆಯವರು ಖಾಸಗಿ ಜಾಗ ಬಿಡಲು ನಿರಾಕರಿಸಿದ್ದಾರೆ. ಮೊನ್ನೆ ತಹಸೀಲ್ದಾರ್ ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಜಾಗದವರಲ್ಲಿ ವಿನಂತಿ ಮಾಡಿದರೂ ಅವರು ಕೇಳುತ್ತಿಲ್ಲ. ಜಿಲ್ಲಾಧಿಕಾರಿಗೆ ಕೂಡ ಪಂಚಾಯತ್ ಮೂಲಕವು ಮನವಿ ಸಲ್ಲಿಸಿದ್ದೇವೆ ಮಾತ್ರವಲ್ಲದೆ ಪಂಚಾಯತ್ ಸದಸ್ಯರು ಖುದ್ದಾಗಿ ಮನೆಯವರನ್ನು ಕರೆದುಕೊಂಡು ಹೋಗಿ ಸಮಸ್ಯೆಯನ್ನು ತಿಳಿಸಿದ್ದಾರೆ. ಶಾಸಕರು ಕೂಡ ನಿರಂತರ ಈ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ನಿರಂತರ ಈ ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.