ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬೆಳ್ಳೆ ನಾರಾಯಣಗುರು ಶಾಲೆಯ ಇಂಟರ‍್ಯಾಕ್ಟ್ ವಿದ್ಯಾರ್ಥಿಗಳಿಂದ ಗದ್ದೆ ನಾಟಿ ; ಕೃಷಿ ಮಾಹಿತಿ

Posted On: 08-07-2024 06:38AM

ಶಿರ್ವ : ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಇಂಟರ‍್ಯಾಕ್ಟ್ ವಿದ್ಯಾರ್ಥಿಗಳು ಪಡುಬೆಳ್ಳೆಯ ಸಡಂಬೈಲು ಪ್ರಗತಿಪರ ಕೃಷಿಕ ರಘುರಾಮ ನಾಯಕ್ ತೊಟ್ಟಿಲು ಮನೆಯ ದೊಡ್ಡ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಬೇಸಾಯಗಾರರ ಕೃಷಿ ದಿನಚರಿಯ ಬಗ್ಗೆ ಪ್ರತ್ಯಕ್ಷ ಅನುಭವ ಪಡೆದು ಕೊಂಡರು.

ವಿದ್ಯಾರ್ಥಿಗಳ ಬರುವಿಕೆಗಾಗಿಯೇ ದೊಡ್ಡ ಗದ್ದೆಯನ್ನು ಉಳುಮೆ ಮಾಡಿ ಸಿದ್ಧಗೊಳಿಸಿದ್ದು, ನಾಟಿ ಮಾಡುವ ಪೂರ್ವದಲ್ಲಿ ಬೇಸಾಯಗಾರನ ದಿನಚರಿ, ಉಳುಮೆಯ ವಿಧಾನ, ಭತ್ತದ ತಳಿಯ ಬಗ್ಗೆ ಮಾಹಿತಿ ನೀಡಿ, ನಾಟಿ ಮಾಡುವ ವಿಧಾನದ ಬಗ್ಗೆ ರಘುರಾಮ ನಾಯಕ್ ವಿವರಿಸಿದರು.

ಮಳೆಯಲ್ಲಿಯೇ ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡು ಹೊಸ ಅನುಭವವನ್ನು ಪಡೆದುಕೊಂಡರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರಿನುಷಾ, ಇಂಟರ‍್ಯಾಕ್ಟ್ ಕೋರ್ಡಿನೇಟರ್ ವೀಣಾ ಆಚಾರ್ಯ, ಸಹ ಶಿಕ್ಷಕಿಯರಾದ ರೂಪಾ, ದೀಕ್ಷಾ, ಶಾಹಿಸ್ತಾ, ವೀಣಾ ನಾಯಕ್, ವಾಹನ ಚಾಲಕ ಮಂಜುನಾಥ್ ಪೂಜಾರಿ ವಿದ್ಯಾರ್ಥಿಗಳೊಂದಿಗೆ ಸಾಥ್ ನೀಡಿದರು. ಇಂಟರ‍್ಯಾಕ್ಟ್ ಅಧ್ಯಕ್ಷೆ ಭವಿಷ್ಯಾ, ಕಾರ್ಯದರ್ಶಿ ಡೇವಿಡ್ ತರಂಗ್ ಸಹಿತ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ವಿಶೇಷ ಅನುಭವವನ್ನು ಸವಿದರು.