ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಕ್ರಿಕೆಟಿಗ ಸೂರ್ಯಕುಮಾರ್​ ಯಾದವ್​ ದಂಪತಿ ಕಾಪು ಹೊಸ ಮಾರಿಗುಡಿ ಭೇಟಿ

Posted On: 09-07-2024 02:00PM

ಕಾಪು : ಪುರುಷರ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಿಲ್ಲರ್ ಅವರ ಅಮೂಲ್ಯ ಕ್ಯಾಚ್ ಹಿಡಿದು ಟೀಂ ಇಂಡಿಯಾಕ್ಕೆ ಜಯ ತಂದು ಕೊಟ್ಟ ಸೂರ್ಯಕುಮಾರ್​ ಯಾದವ್​ ಮತ್ತು ಅವರ ಪತ್ನಿ ದಿವೀಶಾ ಶೆಟ್ಟಿ ಮಂಗಳವಾರ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಕಾಪುದ ಅಮ್ಮ' (ಕಾಪುವಿನ ತಾಯಿ) ಎಂದು ತುಳುವಿನಲ್ಲಿ ಹೇಳಿದರು. ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಬಂದಿದ್ದೇನೆ. ನಾನೊಬ್ಬ ಸೆಲೆಬ್ರಿಟಿ ಎಂಬ ಆಲೋಚನೆಯ ನನಗೆ ಬಂದಿಲ್ಲ ಆಟದಲ್ಲಿ ಉತ್ತಮ ಪ್ರದರ್ಶನದ ಬಗ್ಗೆ ಗಮನಹರಿಸಿದ್ದೇನೆ. ದೇಶಕ್ಕೆ ಕಪ್ ತಂದುಕೊಡುವ ಸಂದರ್ಭವನ್ನು ದೇವರು ಸೃಷ್ಟಿ ಮಾಡಿದ್ದಾನೆ. ತಂಡದ ಕಪ್ತಾನ ಆಗೋದು ನಮ್ಮ ಕೈಯಲ್ಲಿಲ್ಲ ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನಮ್ಮ ಗುರಿ. ಕಾಪು ಮಾರಿಯಮ್ಮನ ದರುಶನ ಮಾಡಿದ ಮೇಲೆ ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ಪೂಜೆ ಸಲ್ಲಿಕೆ ಮಾಡಿ ಶಾಂತಿ ಪ್ರಾಪ್ತಿಯಾದ ಅನುಭವವಾಯ್ತು. ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಬರಬೇಕು ಎಂಬ ಇಚ್ಛೆ ಇದೆ ಎಂದರು.

ಈ ಸಂದರ್ಭ ದೇವಳದ ತಂತ್ರಿವರ್ಯರಾದ ಕೆ.ಪಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ ಹಾಗೂ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಕಲ್ಯರವರು ಪ್ರಾರ್ಥಿಸಿ ಸೂರ್ಯಕುಮಾ‌ರ್ ದಂಪತಿಗೆ ಅನುಗ್ರಹ ಪ್ರಸಾದ ನೀಡಿದರು. ದೇವಳದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿದರು. ಇದೇ ವೇಳೆ ಟೀಮ್ ಇಂಡಿಯಾ ಆಟಗಾರನಿಗೆ ಸೂಕ್ತ ಭದ್ರತೆ ಒದಗಿಸಲು ಮಾರಿಗುಡಿ ಸುತ್ತ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಸೂರ್ಯಕುಮಾರ್ ಜೊತೆ ಅಭಿಮಾನಿಗಳು ಅಟೋಗ್ರಾಫ್, ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಈ ಸಂದರ್ಭ ಕಾಪು ಕ್ಷೇತ್ರದ ಶಾಸಕರು, ದೇವಳದ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಕೆ.ರವಿಕಿರಣ್, ಸಮಿತಿಯ ಸದಸ್ಯರಾದ ಮಾಧವ ಆರ್ ಪಾಲನ್, ಮನೋಹರ್ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಅರುಣ್ ಶೆಟ್ಟಿ ಪಾದೂರು ಮತ್ತಿತರರು ಉಪಸ್ಥಿತರಿದ್ದರು.