ಪಡುಬಿದ್ರಿ ಸಿ.ಎ.ಸೊಸೈಟಿ : ನೂತನ ಎಲೆಕ್ಟ್ರಿಕಲ್ ಸ್ಕೂಟರ್ ಡೀಲರ್ ಶಿಪ್ ಯೋಜನೆಗೆ ಚಾಲನೆ
Posted On:
16-07-2024 09:35AM
ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.), ಇ- ಅಶ್ವ ಆಟೋಮೇಟಿವ್ ಇವರೊಂದಿಗೆ ಆರಂಭಿಸಿರುವ ನೂತನ ಯೋಜನೆ ಎಲೆಕ್ಟ್ರಿಕಲ್ ಸ್ಕೂಟರ್ ಡೀಲರ್ ಶಿಪ್ ಸೋಮವಾರದಂದು ಸೊಸೈಟಿಯ ಸಿಟಿ ಶಾಖೆಯ ಆವರಣದಲ್ಲಿ ಶುಭಾರಂಭಗೊಂಡಿತು.
ಇ–ಅಶ್ವ ಆಟೋಮೇಟೀವ್ ನ ಪಾಲುದಾರರಾದ ಕಪಿಲ್ ಕುಮಾರ್ ಹಾಗೂ ಜಗದೀಪ್ ಡಿ. ಸುವರ್ಣ ಸ್ಕೂಟರ್ ನ ಕೀಯನ್ನು ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಇವರಿಗೆ ಹಸ್ತಾಂತರಿಸುವ ಮೂಲಕ ಯೋಜನೆಯು ಚಾಲನೆಗೊಂಡಿತು.
ಈ ಸಂದರ್ಭ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಭಾರಿಗೆ ಸಹಕಾರಿ ಸಂಸ್ಥೆಯೊಂದು ಎಲೆಕ್ಟ್ರಿಕ್ ಸ್ಕೂಟರ್ ನ ಡೀಲರ್ಶಿಪನ್ನು ಪಡೆದು, ಈಗಾಗಲೇ ಉತ್ತರಭಾರತದಲ್ಲಿ ಹೆಸರುವಾಸಿಯಾಗಿರುವ ಇ – ಅಶ್ವ ಆಟೋಮೇಟಿವ್ ಇದರ ಜನಸ್ನೇಹಿಯಾದ ಎಲೆಕ್ಟ್ರಿಕಲ್ ಸ್ಕೂಟರನ್ನು ಜಿಲ್ಲೆಗೆ ಪರಿಚಯಿಸುತ್ತಿದ್ದು ಸೊಸೈಟಿಯ ಮುಖಾಂತರ ಖರೀದಿಸುವವರಿಗೆ ರೂ.9,999/- ಡಿಸ್ಕೌಂಟ್ ಹಾಗೂ ಸಾಲ ಸೌಲಭ್ಯವನ್ನು ಕೂಡಾ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಬಿ.ಜೆ.ಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿರುವ ಪ್ರಕಾಶ್ ಶೆಟ್ಟಿ ಮಾತನಾಡಿ ಈಗಾಗಲೇ ಸರಕಾರ ವಾಯುಮಾಲಿನ್ಯ ರಹಿತ ಎಲೆಕ್ಟ್ರಿಕಲ್ ವಾಹನಗಳ ಖರೀದಿ ಹಾಗೂ ಮಾರಾಟಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಈ ಯೋಜನೆಯು ಯಶಸ್ವಿಯಾಗಲಿ ಎಂದು ಹಾರೈಸಿದರು.
ಪಡುಬಿದ್ರಿ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪಾತ್ರಿ ಹರಿದಾಸ್ ಭಟ್ ರವರು ನೂತನ ಯೋಜನೆಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ನಿರ್ದೇಶಕರಾದ ರಸೂಲ್ ವೈ.ಜಿ, ಗಿರೀಶ್ ಪಲಿಮಾರು, ಶಿವರಾಮ ಎನ್ ಶೆಟ್ಟಿ, ಮಾಧವ ಆಚಾರ್ಯ, ಗ್ರಾಹಕರಾದ ಫೆಲಿಕ್ಸ್, ಪ್ರವೀಣ್, ಸೊಸೈಟಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ ವಂದಿಸಿದರು.