ಉಚ್ಚಿಲ ದಸರಾ ಉತ್ಸವ - 2024 ವಿಜ್ರಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ : ಡಾ. ಜಿ. ಶಂಕರ್
Posted On:
18-07-2024 07:53PM
ಉಚ್ಚಿಲ : ಕಳೆದ 2 ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ವೈಭವೋಪೇತ ಹಾಗೂ ಶಿಸ್ತುಬದ್ಧವಾಗಿ ನಡೆದ ಉಚ್ಚಿಲ ದಸರಾವನ್ನು ಈ ಬಾರಿ ಅಕ್ಟೋಬರ್ 3 ರಿಂದ 12ರವರೆಗೆ ಸರ್ವರ ಸಹಕಾರದೊಂದಿಗೆ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವಿಜ್ರಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ. ದಸರಾ ಯಶಸ್ಸಿಗೆ ಭಕ್ತಾದಿಗಳ ಸಹಕಾರ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್ ಹೇಳಿದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಕ್ಷೇತ್ರಾಡಳಿತ ಸಮಿತಿ, ಉಚ್ಚಿಲ ದಸರಾ ಸಮಿತಿಯ ಸಹಯೋಗದೊಂದಿಗೆ ಬುಧವಾರ ಉಚ್ಚಿಲ ಮೊಗವೀರ ಭವನದ ಶಾಲಿನಿ ಜಿ. ಶಂಕರ್ ವೇದಿಕೆಯಲ್ಲಿ ನಡೆದ ಉಚ್ಚಿಲ ದಸರಾ-2024 ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ದಸರಾ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ದಿನಂಪ್ರತಿ ಚಂಡಿಕಾ ಯಾಗ, ಭಜನೆ, ಸಹಸ್ರ ಸುಮಂಗಲೆಯರಿಂದ ಪ್ರತಿನಿತ್ಯ ಸಾಮೂಹಿಕ ಕುಂಕುಮಾರ್ಚನೆ, ಖ್ಯಾತ ಕಲಾವಿದರು ಹಾಗೂ ಸ್ಥಳೀಯ ಮಹಿಳೆಯರಿಂದ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಿತ್ಯ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಸಾರ್ವಜನಿಕ ಉಪಹಾರದ ವ್ಯವಸ್ಥೆ ಮಾಡಲಾಗುವುದು.
ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮುದ್ದು ಮಕ್ಕಳಿಗಾಗಿ ಶ್ರೀ ಶಾರದಾ ಮಾತೆ ಛದ್ಮವೇಷ ಸ್ಪರ್ಧೆ, ಮಹಿಳೆಯರಿಗಾಗಿ ಹುಲಿಕುಣಿತ ಸ್ಪರ್ಧೆ ನಡೆಯಲಿದೆ. ಮಾತ್ರವಲ್ಲದೆ ಕುಸ್ತಿ ಹಾಗೂ ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಲಾಗುವುದು.
ಸಾಮೂಹಿಕ ದಾಂಡಿಯ ನೃತ್ಯ, ಅವಿಭಜಿತ ದ.ಕ. ಜಿಲ್ಲೆ ವಿವಿಧ ತಂಡಗಳಿಂದ ಸಾಮೂಹಿಕ ಕುಣಿತ ಭಜನೆ ಇರಲಿದೆ.
ಅ.12 ರಂದು ಶೋಭಾಯಾತ್ರೆಯು ಹೊರಡಲಿದ್ದು, ಕಾಪು ದೀಪಸ್ಥಂಭ ಬಳಿಯ ಸಮುದ್ರ ತೀರದಲ್ಲಿ ವಿಗ್ರಹಗಳ ವಿಸರ್ಜನೆ ಮಾಡಲಾಗುವುದು. ಶೋಭಾಯಾತ್ರೆಯಲ್ಲಿ ನವ ನವೀನ ಮಾದರಿಯ ಟ್ಯಾಬ್ಲೋಗಳು, ಹುಲಿವೇಷ ತಂಡಗಳು, ಭಜನಾ ತಂಡಗಳು, ಚೆಂಡೆ ಬಳಗ ಸೇರಿದಂತೆ ವಿವಿಧ ವೇಷ ಭೂಷಣಗಳು ಇರಲಿದೆ.
ವಿಸರ್ಜನೆಯ ಸಂದರ್ಭದಲ್ಲಿ ಸಮುದ್ರ ಮಧ್ಯೆ ಬೋಟುಗಳಿಂದ ವಿದ್ಯುತ್ ದೀಪಾಲಂಕಾರ, ಲೇಸರ್ ಶೋ, ಮಹಿಳೆಯರಿಂದ ಏಕಕಾಲದಲ್ಲಿ ಸಾಮೂಹಿಕ ಮಂಗಳಾರತಿಯ ಕಾರ್ಯಕ್ರಮವಿರುತ್ತದೆ. ಕಾಶಿಯ ಶ್ರೀ ವಿಶ್ವನಾಥ ಕ್ಷೇತ್ರದಿಂದ ಆಗಮಿಸುವ ಅರ್ಚಕರಿಂದ ಬ್ರಹತ್ ಗಂಗಾರತಿ ಬೆಳಗಿಸುವ ಕಾರ್ಯಕ್ರಮ, ಆಕರ್ಷಕ ಸುಡು ಮದ್ದು ಪ್ರದರ್ಶನ ಆಯೋಜಿಸಲಾಗುವುದು ಎಂದರು.
ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ ಮಾತನಾಡಿ, ವಿಭಿನ್ನವಾಗಿ ಹಾಗೂ ವಿಶ್ವಕ್ಕೆ ಮಾದರಿಯಾಗಿ ಉಚ್ಚಿಲ ದಸರಾ ನಡೆಸಲಾಗುತ್ತದೆ. ಹಿಂದಿನಂತೆ ಮಹಾಲಕ್ಷ್ಮೀ ಬ್ಯಾಂಕ್ ಮತ್ತು ಮೀನು ಮಾರಾಟ ಫೆಡರೇಶನ್ ಉಚ್ಚಿಲ ದಸರಾದ ಭಾಗವಾಗಲಿದೆ. ಈ ಬಾರಿ ಮಹಿಳಾ ಹುಲಿ ವೇಷ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಸಂಸ್ಥೆಯ ವತಿಯಿಂದ ನಡೆಸಲಾಗುವುದು ಎಂದರು.
ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 2 ವರ್ಷಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಉಚ್ಚಿಲ ದಸರಾ ಮಹೋತ್ಸವವನ್ನು ಈ ಬಾರಿ ನಾಡಿಗೆ ಮಾದರಿಯಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಈ ಬಾರಿ ಸುಮಾರು ರೂ.4 ಕೋ. ವೆಚ್ಚದ ಬಜೆಟ್ ನಿರ್ಧರಿಸಲಾಗಿದ್ದು, ಜಾತಿ ಮತ ಬೇಧ ಮರೆತು ಸರ್ವರ ಸಹಕಾರ ಹಾಗೂ ವಿವಿಧ ಗ್ರಾಮಸಭೆಗಳು, ಮೀನುಗಾರ ಸಂಘಟನೆಗಳ ಬೆಂಬಲದೊಂದಿಗೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ದ.ಕ.ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ ಮಾತನಾಡಿ, ಮೊಗವೀರ ಸಮಾಜದ ವೀರ ಪರಂಪರೆಯ ಪ್ರತೀಕವಾಗಿ ಈ ಬಾರಿ ಉಚ್ಚಿಲ ದಸರಾದಲ್ಲಿ ಕುಸ್ತಿ ಹಾಗೂ ದೇಹದಾರ್ಡ್ಯ ಸ್ಪರ್ಧೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಅದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ ಎಂದರು.
ದಸರಾ ಸಮಿತಿಗೆ ಪುನರಾಯ್ಕೆ: ಕಳೆದ ಬಾರಿ ಉಚ್ಚಿಲ ದಸರಾ ಯಶಸ್ವಿಯ ವಿನಯ ಕರ್ಕೇರ ಮಲ್ಪೆಯವರನ್ನು ಈ ಬಾರಿ ಉಚ್ಚಿಲ ದಸರಾ-2024 ಸಮಿತಿಯ ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಯಿತು. ಅವರು ಈ ಬಾರಿಯ ದಸರಾ ಮಹೋತ್ಸವದ ವಿವಿಧ ಸಮಿತಿಗಳನ್ನು ಘೋಷಿಸಿದರು.
ಶ್ರೀ ಕ್ಷೇತ್ರ ಉಚ್ಚಿಲದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ್ ಎಸ್.ಸುವರ್ಣ, ಹಿರಿಯ ಮೊಗವೀರ ಮುಖಂಡರಾದ ಹರಿಯಪ್ಪ ಕೋಟ್ಯಾನ್, ದಯಾನಂದ ಸುವರ್ಣ, ಮಹಾಜನ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಉಷಾರಾಣಿ ಬೋಳೂರು, ಮಹಾಜನ ಸಂಘದ ಕೋಶಾಕಾರಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿ ಸುಜಿತ್ ಎಸ್. ಸಾಲ್ಯಾನ್, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ಚೇತನ್ ಬೇಂಗ್ರೆ, ಮನೋಜ್ ಪಿ. ಕಾಂಚನ್, ಸುಗುಣಾ ಕರ್ಕೇರ, ಉದಯಕುಮಾರ್ ಹಟ್ಟಿಯಂಗಡಿ, ವರದರಾಜ್ ಬಂಗೇರ, ಸತೀಶ್ ಅಮೀನ್ ಬಾರ್ಕೂರು, ಮನೋಹರ್ ಬೋಳೂರು, ಯುವರಾಜ್ ಕಿದಿಯೂರು ಉಪಸ್ಥಿತರಿದ್ದರು.
ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.