ಪಡುಬಿದ್ರಿ : ನಡಿಪಟ್ಣ ಕಡಲ್ಕೊರೆತ ಪ್ರದೇಶಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ
Posted On:
27-07-2024 07:28PM
ಪಡುಬಿದ್ರಿ : ಇಲ್ಲಿನ ನಡಿಪಟ್ಣ ಕಡಲ್ಕೊರೆತ ಪ್ರದೇಶಕ್ಕೆ ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಸಚಿವರಾದ ಮಂಕಾಳ ವೈದ್ಯ ಶನಿವಾರ ಭೇಟಿ ನೀಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಕರಾವಳಿಗೆ ಶಾಶ್ವತ ಪರಿಹಾರಕ್ಕಾಗಿ ಯೋಜನೆ ರೂಪಿತವಾಗಿದೆ. ಕೇಂದ್ರಕ್ಕೂ ರೂ.478 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಡಲ್ಕೊರೆತಕ್ಕೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 5 ಕೋಟಿಯಂತೆ ಒಟ್ಟು 15 ಕೋಟಿ ತಕ್ಷಣದ ಪರಿಹಾರ ಬಿಡುಗಡೆಯಾಗಿದೆ. ಇದರಲ್ಲಿ ಪಡುಬಿದ್ರಿಗೆ 1ಕೋಟಿ ರೂ. ನೀಡಲಾಗುವುದು. ಪ್ರಸ್ತುತ ಮೀನುಗಾರಿಕಾ ರಸ್ತೆ ಉಳಿಸಬೇಕಾಗಿದೆ. ಅದಕ್ಕೆ ತಕ್ಷಣ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ ಎಂದರು.
ಈ ಸಂದರ್ಭ ಸ್ಥಳೀಯರು ಕಡಲ್ಕೊರೆತ ಸಮಸ್ಯೆಗೆ ತಕ್ಷಣ ಪರಿಹಾರ ನೀಡಿ, ಪ್ರತಿ ಬಾರಿಯು ಭರವಸೆ ಮಾತ್ರ ಸಿಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ನಿಮ್ಮ ಸಮಸ್ಯೆ ನನ್ನ ಸಮಸ್ಯೆ ಖಂಡಿತವಾಗಿ ಬಗೆಹರಿಸಲಾಗುವುದು ಎಂದರು.
ನಡಿಪಟ್ಣದ ವಿಷ್ಣು ಮಂದಿರ ಸಮೀಪದಲ್ಲಿರುವ ಅಂತರಾಷ್ಟ್ರೀಯ ಮನ್ನಣೆಯ ಬ್ಲೂ ಫ್ಲ್ಯಾಗ್ ಬೀಚ್ ನ ರಸ್ತೆ ಸಮದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದೆ. ಈಗಾಗಲೇ ಈ ಭಾಗದ ಮೀನುಗಾರಿಕಾ ಶೆಡ್, ವಿಶ್ರಾಂತಿ ಗೃಹ, ಸುಮಾರು 35 ತೆಂಗಿನ ಮರಗಳು ಸಮುದ್ರ ಪಾಲಾಗಿದೆ.
ಈ ಸಂದರ್ಭ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.