ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ಬಂಟರ ಸಂಘದ ಮಹಿಳಾ ಘಟಕದಿಂದ ಆಟಿಡೊಂಜಿ ದಿನ ಸಂಭ್ರಮ

Posted On: 29-07-2024 07:28PM

ಕಾಪು : ಇಲ್ಲಿನ ಬಂಟರ ಸಂಘ (ರಿ.) ಇದರ ಆಶ್ರಯದಲ್ಲಿ ಕಾಪು ಬಂಟರ ಮಹಿಳಾ ಘಟಕದ ನೇತೃತ್ವದಲ್ಲಿ ಕಾಪು ಶ್ರೀ ಲಕ್ಷ್ಮೀ ಜರ್ನಾದನ ಸಭಾಂಗಣ ಇಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಯಮಿ ದಿವಾಕರ ಶೆಟ್ಟಿ ಮಲ್ಲಾರು, ಮಸ್ಕತ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಸ್ಕತ್‌ನಲ್ಲೂ ಕೂಡ ನಾವು ನಮ್ಮೂರಿನ ಸಂಸ್ಕೃತಿ, ಸಂಸ್ಕಾರದ ಆಟಿಯ ಕೂಟದಂತಹ ಹಲವಾರು ಕಾರ‍್ಯಕ್ರಮಗಳನ್ನು ಆಯೋಜಿಸಿ ಯಶಸ್ಸನ್ನು ಕಂಡಿದ್ದೇವೆ. ಕಾಪು ಬಂಟರ ಭವನ ನಿರ್ಮಾಣ ಮಾಡುವಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆಯನ್ನು ನೀಡಿದರು.

ಕಾಪು ಕ್ಷೇತ್ರದ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ನಾವು ಪುರಾತನ ಕಾಲದ ಆಹಾರ ಪದ್ಧತಿ ಮತ್ತು ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಮನದಟ್ಟು ಮಾಡಿ ಆಟಿಡೊಂಜಿ ದಿನ ಕಾರ‍್ಯಕ್ರಮ ಏರ್ಪಡಿಸಿದರೆ ಹಿಂದಿನ ಕಾಲದ ಆಹಾರ ಪದ್ದತಿಯ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ನಮ್ಮ ಹಿರಿಯರು ನಮಗೆ ಕೊಟ್ಟ ಕೊಡುಗೆ ಏನೆಂದರೆ ದೈವಸ್ಥಾನ, ನಾಗ ಮೂಲಸ್ಥಾನ ಮುಂತಾದ ಆರಾಧನ ಕ್ರಮದಿಂದ ನಮ್ಮ ಮುಂದಿನ ಪೀಳಿಗೆಯು ಸುಗಮವಾಗಿ ನಡೆಯಲು ಸಾಧ್ಯವಿದೆ. ಹಿಂದಿನ ಕಾಲದಲ್ಲಿ ಬಡತನ ಇತ್ತು ಆದರೆ ಆ ಕಾಲದಲ್ಲಿ ಆಟಿ ತಿಂಗಳಲ್ಲಿ ಪರಿಸರದಲ್ಲಿ ಬೆಳೆಯುವ ಆಹಾರ ವಸ್ತುಗಳನ್ನು ಉಪಯೋಗಿಸಿ ನಮ್ಮ ಹಿರಿಯರು ಜೀವನವನ್ನು ಸಾಗಿಸುತ್ತಿದ್ದರು ಎಂದು ಹೇಳಿದರು. ಮುಖ್ಯ ಅಥಿತಿಯಾಗಿ ಆಗಮಿಸಿದ್ದ ರೇಡಿಯೋ ಜಾಕಿ ಆರ್ ಜೆ ನಯನಾ ಮಾತನಾಡಿ, ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಬೇಕು, ಈಗಿನ ಮಕ್ಕಳು ಯಾವುದೇ ಕಾರ್ಯಕ್ರಮಕ್ಕೂ ಹೋಗುವುದಿಲ್ಲ ನಾವೇ ಅವರನ್ನು ಕರೆದುಕೊಂಡು ಹೋಗಬೇಕು. ತಾಯಂದಿರು ಮಕ್ಕಳಿಗೆ ಮನೆಯಲ್ಲಿಯೇ ನಮ್ಮ ಆಚಾರ ವಿಚಾರದ ಬಗ್ಗೆ ತಿಳಿಹೇಳಬೇಕು ಎಂದರು. ಉದ್ಯಮಿ ಉದಯ ಸುಂದರ್ ಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿದರು.

ವಿದ್ಯಾರ್ಥಿವೇತನ, ಗೌರವ, ಸನ್ಮಾನ : ರಾಧಾ ಸುಂದರ್ ಶೆಟ್ಟಿಯವರ ಸ್ಮರಣಾರ್ಥ ಸಾಯಿರಾಧ ಗ್ರೂಪ್ನ ಮನೋಹರ ಶೆಟ್ಟಿಯವರ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ೯೦% ಮೇಲ್ಪಟ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ದಿವಂಗತ ಡಾ. ಪ್ರಭಾಕರ್ ಶೆಟ್ಟಿಯವರ ಸ್ಮರಣಾರ್ಥ ಮಗನಾದ ಡಾ. ಪ್ರಶಾಂತ್ ಶೆಟ್ಟಿಯವರು ಎಸ್.ಎಸ್.ಎಲ್ ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗೆ ಬಂಗಾರದ ಪದಕವನ್ನು ನೀಡಿ ಗೌರವಿಸಿದರು. ನೀಟ್‌ನಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗೌರವಿಸಲಾಯಿತು. ಹಿರಿಯ ಕೃಷಿಕರಾದ ಜಯಲಕ್ಷ್ಮೀ ಆಳ್ವ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ. ವಾಸುದೇವ ಶೆಟ್ಟಿಯವರು ಮಾತನಾಡಿ ಬಂಟರ ಭವನ ನಿರ್ಮಾಣಕ್ಕಾಗಿ ಈಗಾಗಲೇ ಪೂರ್ವಭಾವಿ ಕೆಲಸ ಕಾರ್ಯಗಳು ಮುಗಿದಿದ್ದು ಯೋಜನೆಯ ರೂಪುರೇಷೆಗಳು ತಯಾರಾಗಿದ್ದು ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ನಿರ್ಮಾಣ ಕಾರ‍್ಯದಲ್ಲಿ ಮುಂದುವರಿಯಲಿದ್ದೇವೆ ಎಂದು ಹೆಳಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ರವಿರಾಜ್ ಶೆಟ್ಟಿ , ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ರತ್ನಾಕರ್ ಹೆಗ್ಡೆ, ಜೊತೆ ಕೋಶಾಧಿಕಾರಿ ದಿವಾಕರ ಬಿ. ಶೆಟ್ಟಿ ಕಳತ್ತೂರು, ಬಂಟರ ಸಂಘದ ಯುವ ಘಟಕದ ಅಧ್ಯಕ್ಷರಾದ ರಘುರಾಮ ಶೆಟ್ಟಿ ಕೊಪ್ಪಲಂಗಡಿ, ದಿವಾಕರ ಡಿ.ಶೆಟ್ಟಿ , ಪ್ರಭಾತ್ ಶೆಟ್ಟಿ ಮೂಳೂರು, ಮಹಿಳಾ ಘಟಕದ ಸದಸ್ಯರು , ನಿರ್ದೆಶಕರುಗಳು, ಗ್ರಾಮಸ್ಥರು, ಅನೇಕ ಗಣ್ಯರು ಉಪಸ್ಥಿತರಿದ್ದರು. ೧೨ ಗ್ರಾಮಗಳಿಂದ ಮಹಿಳೆಯರು ವಿವಿಧ ಬಗೆಯ ಅಡುಗೆಯನ್ನು ತಯಾರಿಸಿ ತಂದಿದ್ದನ್ನು ಬಡಿಸಿದರು. ಮಹಿಳಾ ಘಟಕದ ಸಂಚಾಲಕಿ ಜಯಲಕ್ಷ್ಮೀ ಎಸ್.ಶೆಟ್ಟಿ ಸ್ವಾಗತಿಸಿದರು. ಕಾಪು ಬಂಟರ ಸಂಘದ ಕಾರ‍್ಯದರ್ಶಿ ಯೋಗಿಶ್ ವಿ.ಶೆಟ್ಟಿ ಪ್ರಸ್ತಾವನೆಗೈದರು. ಪ್ರತಿಮಾ ಆರ್. ಶೆಟ್ಟಿ ಮತ್ತು ಅನಿತಾ ಹೆಗ್ಡೆ ಕಾರ‍್ಯಕ್ರಮ ನಿರೂಪಿಸಿದರು. ಅರ್ಚನಾ ಶೆಟ್ಟಿ ವಂದಿಸಿದರು.